ADVERTISEMENT

ಬೃಹತ್‌ ಟೆಲಿಸ್ಕೋಪ್‌ ಯೋಜನೆಗೆ ಭಾರತದಿಂದ ₹1,250 ಕೋಟಿ ನೆರವು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2023, 16:23 IST
Last Updated 30 ಡಿಸೆಂಬರ್ 2023, 16:23 IST
<div class="paragraphs"><p>ಟೆಲಿಸ್ಕೋಪ್‌ ಯೋಜನೆ (ಸಾಂದರ್ಭಿಕ ಚಿತ್ರ)</p></div>

ಟೆಲಿಸ್ಕೋಪ್‌ ಯೋಜನೆ (ಸಾಂದರ್ಭಿಕ ಚಿತ್ರ)

   

ನವದೆಹಲಿ: ಬ್ರಹ್ಮಾಂಡವನ್ನು ಇನ್ನಷ್ಟು ಆಳವಾಗಿ ಅರಿತುಕೊಳ್ಳುವ ಯುತ್ನವಾಗಿ ಎರಡು ಭೂಖಂಡಗಳನ್ನು ನೆಲೆಯಾಗಿಸಿ ಜಗತ್ತಿನತ್ತ ದೃಷ್ಟಿ ಹರಿಸಲಿರುವ ಬೃಹತ್‌ ಟೆಲಿಸ್ಕೋಪ್‌ ಯೋಜನೆ ಕಾರ್ಯಗತಕ್ಕಾಗಿ ಭಾರತ ₹1,250 ಕೋಟಿ ನೆರವು ನೀಡಲಿದೆ.

ವಿಶ್ವದ ಬೃಹತ್‌ ರೇಡಿಯೊ ಟೆಲಿಸ್ಕೋಪ್‌ ಎನ್ನಲಾದ ಸ್ಕ್ವೈರ್ ಕಿಲೋಮೀಟರ್ ಆ್ಯರೆ (ಎಸ್‌ಕೆಎ) ಯೋಜನೆಗೆ ನೆರವು ನೀಡುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.

ADVERTISEMENT

ಆಸ್ಟ್ರೇಲಿಯಾದ ಪರ್ತ್ ಮತ್ತು ದಕ್ಷಿಣ ಆಫ್ರಿಕಾದ ಕೇಪ್‌ ಟೌನ್‌ ಸಮೀಪ ಈ ಬೃಹತ್‌ ಟೆಲಿಸ್ಕೋಪ್‌ ನೆಲೆ ಹೊಂದಲಿದ್ದು, ಕಾರ್ಯನಿರ್ವಹಿಸಲಿದೆ. 

ಅತ್ಯಾಧುನಿಕ ತಂತ್ರಜ್ಞಾನ,  ಕ್ಷಿಪ್ರವಾಗಿ ಕಾರ್ಯನಿರ್ವಹಿಸಲಿರುವ ಜಗತ್ತಿನ ಸೂಪರ್‌ ಕಂಪ್ಯೂಟರ್‌ಗಳನ್ನು ಈ ಯೋಜನೆಗೆ ಬಳಸಲಾಗುತ್ತಿದೆ. ಇದು, ಜಗತ್ತನ್ನು ಆಳವಾಗಿ, ವಿವರವಾಗಿ ಅರಿತುಕೊಳ್ಳುವ ಕಾರ್ಯಕ್ಕೆ ಹೊಸ ದೃಷ್ಟಿಕೋನ ನೀಡಲಿದೆ ಎನ್ನಲಾಗಿದೆ. ಕಪ್ಪುರಂಧ್ರದ ನಿಗೂಢತೆ, ಗುರುತ್ವಾಕರ್ಷಣ ಅಲೆಗಳ ಚಲನೆ ಅರಿಯುವುದು ಸೇರಿದಂತೆ ಹಲವು ಮಹತ್ವದ ಉದ್ದೇಶಗಳ ಗುರಿ ಸಾಧನೆ ಈ ಯೋಜನೆಯ ಹಿಂದಿದೆ.

ಭಾರತ ಸೇರಿ 10ಕ್ಕೂ ಹೆಚ್ಚು ರಾಷ್ಟ್ರಗಳು ಈ ಯೋಜನೆಯಲ್ಲಿ ಭಾಗಿಯಾಗಿವೆ. ಈ ಕುರಿತ ಹೇಳಿಕೆಯಲ್ಲಿ ಅಣುಶಕ್ತಿ ಇಲಾಖೆಯು, ‘ಎಸ್‌ಕೆಯ ಅಂತರರಾಷ್ಟ್ರೀಯ ಮೆಗಾ ವಿಜ್ಞಾನ ಯೋಜನೆಗೆ ₹ 1,250 ಕೋಟಿ ಒದಗಿಸುವ ಮೂಲಕ ಭಾರತ ಭಾಗಿಯಾಗಲಿದೆ’ ಎಂದು ತಿಳಿಸಿದೆ. 

ಎನ್‌ಸಿಆರ್‌ಎ ಮತ್ತು ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ನೇತೃತ್ವದಲ್ಲಿ ಭಾರತೀಯ ರೇಡಿಯೊ ಖಗೋಳತಜ್ಞರು, ಯೋಜನೆ ರೂಪಿಸುವ, ವಿನ್ಯಾಸ ಮತ್ತು  ಕಾರ್ಯಗತಗೊಳಿಸುವ ಆರಂಭಿಕ ಹಂತದ ಪ್ರಕ್ರಿಯೆಗಳಲ್ಲಿ ಭಾಗಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.