ADVERTISEMENT

ದೆಹಲಿಯಲ್ಲಿ 2ನೇ ದಿನವೂ ದಟ್ಟ ಮಂಜು: 400 ವಿಮಾನಗಳ ಸಂಚಾರ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2025, 16:20 IST
Last Updated 4 ಜನವರಿ 2025, 16:20 IST
ದಟ್ಟ ಮಂಜು: 8 ವಿಮಾನಗಳ ಹಾರಾಟ ರದ್ದು
ದಟ್ಟ ಮಂಜು: 8 ವಿಮಾನಗಳ ಹಾರಾಟ ರದ್ದು   

ನವದೆಹಲಿ: ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನಲ್ಲಿ ಪ್ರದೇಶಗಳಲ್ಲಿ ಶನಿವಾರ ಅತ್ಯಂತ ದೀರ್ಘ ಅವಧಿಯವರೆಗೆ ದಟ್ಟ ಮಂಜು ಕವಿದಿತ್ತು. ದೆಹಲಿ ವಿಮಾನ ನಿಲ್ದಾಣದಲ್ಲಿ ಒಂಬತ್ತು ತಾಸು ಶೂನ್ಯ ಗೋಚರತೆ ಉಂಟಾಯಿತು.

ದೆಹಲಿಯಲ್ಲಿ ಸತತ ಎರಡನೇ ದಿನವೂ ಕವಿದ ದಟ್ಟ ಮಂಜಿನ ಕಾರಣಕ್ಕೆ 19 ವಿಮಾನಗಳ ಮಾರ್ಗವನ್ನು ಬದಲಿಸಲಾಯಿತು. 400ಕ್ಕೂ ಹೆಚ್ಚು ವಿಮಾನಗಳ ಸಂಚಾರ ವಿಳಂಬವಾಗಿದೆ. ಅಲ್ಲದೆ 81 ರೈಲುಗಳ ಸಂಚಾರದಲ್ಲೂ ವಿಳಂಬ ಆಗಿದೆ.

‘ದೆಹಲಿ ವಿಮಾನ ನಿಲ್ದಾಣದಲ್ಲಿ ಶೂನ್ಯ ಗೋಚರತೆಯು ರಾತ್ರಿ 11.30ರಿಂದ ಬೆಳಿಗ್ಗೆ 8.30ರವರೆಗೆ ಇತ್ತು. ಇದು ಈ ಋತುವಿನ ಅತಿ ದೀರ್ಘಾವಧಿಯ ಶೂನ್ಯ ಗೋಚರತೆ. ಸಫ್ದರ್‌ಜಂಗ್‌ನಲ್ಲಿ ಎಂಟು ತಾಸು ಶೂನ್ಯ ಗೋಚರತೆ ಇತ್ತು’ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಶನಿವಾರ ಬೆಳಿಗ್ಗೆ ಅಮೃತಸರ, ಆಗ್ರಾ, ಹಿಂಡನ್, ಚಂಡೀಗಢ ಮತ್ತು ಗ್ವಾಲಿಯರ್, ಪಟ್ನಾ ಮತ್ತು ಶ್ರೀನಗರ ವಿಮಾನ ನಿಲ್ದಾಣಗಳಲ್ಲಿ ಶೂನ್ಯ ಗೋಚರತೆ ಇತ್ತು. ಜಮ್ಮು, ಕಾಶ್ಮೀರದ ಹಲವು ಭಾಗಗಳಲ್ಲಿ ಕನಿಷ್ಠ ತಾಪಮಾನವು 0 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಿದೆ.

ವಾಯವ್ಯ ಭಾರತ ಮತ್ತು ಗಂಗಾ ಬಯಲು ಪ್ರದೇಶದಲ್ಲಿ ಭಾನುವಾರ ಕೂಡ ಇದೇ ರೀತಿಯ ಹಮಾಮಾನ ಇರಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ಮುಂದಿನ ಎರಡು ದಿನಗಳ ಕಾಲ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರಿ ಮಳೆ/ಹಿಮ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜನವರಿ 10– 12ರ ನಡುವೆ ಉಂಟಾಗಲಿರುವ ವಾತಾವರಣದ ಏರುಪೇರಿನಿಂದ ವಾಯವ್ಯ ಭಾರತದಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಐಎಂಡಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.