ADVERTISEMENT

84ನೇ ವಯಸ್ಸಿನಲ್ಲಿ ಎಂಬಿಎ ಪದವಿ ಪಡೆದ ಹಿರಿಯ ವಿಜ್ಞಾನಿ: ಪಿಎಚ್‌ಡಿಗೆ ಸಿದ್ಧತೆ

ಪಿಟಿಐ
Published 29 ಏಪ್ರಿಲ್ 2025, 10:00 IST
Last Updated 29 ಏಪ್ರಿಲ್ 2025, 10:00 IST
<div class="paragraphs"><p>ಎಂಬಿಎ ಪದವಿ ಪಡೆದ ಹಿರಿಯ ವಿಜ್ಞಾನಿ</p></div>

ಎಂಬಿಎ ಪದವಿ ಪಡೆದ ಹಿರಿಯ ವಿಜ್ಞಾನಿ

   

ಚಿತ್ರ ಕೃಪೆ: ಎಕ್ಸ್‌

ನವದೆಹಲಿ: ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎನ್ನುವುದಕ್ಕೆ ಹಿರಿಯ ವಿಜ್ಞಾನಿಯೊಬ್ಬರು ಉದಾಹರಣೆಯಾಗಿದ್ದಾರೆ. ಡಾ. ಗಿರೀಶ್‌ ಮೋಹನ್‌ ಗುಪ್ತಾ ಎನ್ನುವ ವಿಜ್ಞಾನಿಯೊಬ್ಬರು ತಮ್ಮ 84ನೇ ವಯಸ್ಸಿನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಅಲ್ಲದೆ ಪಿಎಚ್‌ಡಿ ಪದವಿ ಪಡೆಯಲೂ ತಯಾರಿ ನಡೆಸುತ್ತಿದ್ದಾರೆ. 

ADVERTISEMENT

ಗುಪ್ತಾ ಅವರು ಐಐಎಂ ಸಂಬಲ್‌ಪುರದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಪದವಿ ಸ್ವೀಕರಿಸುವಾಗ ಮಾತನಾಡಿದ ಅವರು, ‘ಕಲಿಕೆಗೆ ವಯಸ್ಸಿನ ಮಿತಿಯಿಲ್ಲ, ಕುತೂಹಲ ಮತ್ತು ಇಚ್ಛಾಶಕ್ತಿ ಇರುವವರೆಗೂ ಪ್ರತಿದಿನ ಹೊಸ ಅವಕಾಶವಾಗಿರುತ್ತದೆ’ ಎಂದು ಹೇಳಿದ್ದಾರೆ.

ಎಂಬಿಎಯಲ್ಲಿ ಗುಪ್ತಾ ಅವರು ಸಿಜಿಪಿಎ 7.4 ರಷ್ಟು ಅಂಕ ಗಳಿಸಿದ್ದಾರೆ.

‘ನನ್ನ ಮತ್ತು ನನ್ನ ಕುತೂಹಲದ ಮಧ್ಯೆ ವಯಸ್ಸು ಅಡ್ಡಿಯಾಗಲೇ ಇಲ್ಲ. ನನಗೆ ಕ್ರೀಡೆ ಎಂದರೆ ಇಷ್ಟ, ಪ್ರತಿದಿನ ಈಜುತ್ತೇನೆ, ಬ್ಯಾಡ್ಮಿಂಟನ್‌ ಆಡುತ್ತೇನೆ. ಫಿಟ್‌ನೆಸ್‌ ಮತ್ತು ಕಲಿಕೆ ನನ್ನ ಜೀವನದಲ್ಲಿ ಸ್ಥಿರವಾಗಿರುತ್ತದೆ’ ಎಂದು ಹೇಳಿಕೊಂಡಿದ್ದಾರೆ.

ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ಗುಪ್ತಾ ಜನಿಸಿದ್ದರು. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಮಾಡಿದ್ದ ಗುಪ್ತಾ, ಭಾಭಾ ಅಟಾಮಿಕ್ ರಿಸರ್ಚ್‌ ಸೆಂಟರ್‌ನಲ್ಲಿ ನ್ಯೂಕ್ಲಿಯರ್ ಸಂಶೋಧನೆಗೆ ಸಂಬಂಧಿಸಿದ ಯೋಜನೆಯಲ್ಲಿ ಕೆಲಸ ಮಾಡಿದ್ದರು.

ಆ ಬಳಿಕ ಗುಪ್ತಾ, ಕೈಗಾರಿಕಾ ನಾವೀನ್ಯತೆಯಲ್ಲಿ ತೊಡಗಿಕೊಂಡರು, ಭಾರತೀಯ ರೈಲ್ವೆ, ರಕ್ಷಣಾ ಸಂಸ್ಥೆಗಳು ಮತ್ತು ಖಾಸಗಿ ವಲಯದ ಕಂಪನಿಗಳಿಗೆ ಸುರಕ್ಷತೆ ಮತ್ತು ಯಾಂತ್ರೀಕೃತಗೊಂಡ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಉದ್ಯಮಗಳನ್ನು ಸ್ಥಾಪಿಸಿದರು.

ಗುಪ್ತಾ ಜೆನೋ ಎಂಜಿನಿಯರಿಂಗ್‌, ಬೋವಾ ಗ್ಲೋಬಲ್‌ ಸೇರಿದಂತೆ ಹಲವು ಕಂಪನಿಗಳನ್ನು ಸ್ಥಾಪಿಸಿ 345ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ.

1984-85ರಲ್ಲಿ ಪಂಜಾಬ್‌ನಲ್ಲಿ ನಡೆದ ಭಾರತ-ಪಾಕ್ ಗಡಿ ದಂಗೆಯ ಸಮಯದಲ್ಲಿ ಬಳಸಲಾದ ಹೈ-ಸೆಕ್ಯುರಿಟಿ ಫೆನ್ಸಿಂಗ್ ಉತ್ಪನ್ನವಾದ ಪಂಚ್ಡ್ ಟೇಪ್ ಕಾನ್ಸರ್ಟಿನಾ ಕಾಯಿಲ್ ಅಭಿವೃದ್ಧಿಗಾಗಿ 1986ರಲ್ಲಿ ಆಗಿನ ರಾಷ್ಟ್ರಪತಿ ಆರ್‌. ವೆಂಕಟರಮಣನ್‌ ಅವರು ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.