ನವದೆಹಲಿ: 2006 ಮತ್ತು 2007ರ ನಡುವೆ ರಾಷ್ಟ್ರ ರಾಜಧಾನಿಯನ್ನು ಬೆಚ್ಚಿ ಬೀಳಿಸಿದ್ದ ಹಾಗೂ ಒಂದು ವರ್ಷಕ್ಕೂ ಹೆಚ್ಚು ಕಾಲ ತಲೆ ಮರೆಸಿಕೊಂಡಿದ್ದ ಸರಣಿ ಹಂತಕ ಚಂದ್ರಕಾಂತ್ ಝಾನನ್ನು ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
2023ರ ಅಕ್ಟೋಬರ್‌ನಲ್ಲಿ ಪೆರೋಲ್ ಮೇಲೆ ಬಿಡುಗಡೆಗೊಂಡಿದ್ದ ಈತ ಪರಾರಿಯಾಗಿದ್ದ. ತೀವ್ರ ಕಾರ್ಯಾಚರಣೆ ಬಳಿಕ ಶುಕ್ರವಾರ ಹಳೆ ದೆಹಲಿ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ ಶಾಖೆ) ಸಂಜಯ್ ಕುಮಾರ್ ಸೈನ್ ಹೇಳಿದ್ದಾರೆ.
ಮೂರು ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಈತನ ತಲೆಗೆ ₹50,000 ಬಹುಮಾನ ಘೋಷಿಸಲಾಗಿತ್ತು. ಅಲ್ಲದೇ ಆತನ ಪತ್ತೆಗಾಗಿ ಕ್ರೈಂ ಬ್ರಾಂಚ್ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಜನವರಿ 17 ರಂದು ಹಳೆಯ ದೆಹಲಿ ರೈಲು ನಿಲ್ದಾಣದಿಂದ ಬಿಹಾರಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಝಾನನ್ನು ಬಂಧಿಸಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.