ADVERTISEMENT

ಜಾರ್ಖಂಡ್‌ನ ಕಲ್ಲಿದ್ದಲು ಗಣಿಯಲ್ಲಿ ಅವಘಡ: ಹಲವರು ಸಿಲುಕಿರುವ ಶಂಕೆ  

ಪಿಟಿಐ
Published 21 ಏಪ್ರಿಲ್ 2022, 12:25 IST
Last Updated 21 ಏಪ್ರಿಲ್ 2022, 12:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಧನ್‌ಬಾದ್‌: ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ಕಲ್ಲಿದ್ದಲು ಗಣಿಯೊಂದರಲ್ಲಿ ಕುಸಿತ ಸಂಭವಿಸಿದ್ದು, ಅದರಲ್ಲಿ ಹಲವಾರು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ

ಗಣಿಯಲ್ಲಿ ಸಿಲುಕಿರುವವರ ಸಂಖ್ಯೆ ಅಥವಾ ಗಣಿ ಅವಘಡದ ಸ್ಪಷ್ಟ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಗಣಿಯೊಳಗೆ ಕೆಲವು ಗ್ರಾಮಸ್ಥರು ಸಿಕ್ಕಿಬಿದ್ದಿರುವ ಸಾಧ್ಯತೆಗಳಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ’ ಎಂದು ಜಾರ್ಖಂಡ್ ಸರ್ಕಾರದ ಗಣಿ ಇಲಾಖೆಯ ನಿರ್ದೇಶಕ ಅಮಿತ್ ಕುಮಾರ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

ಧನ್‌ಬಾದ್‌ ಜಿಲ್ಲೆಯ ನಿರ್ಸಾದಲ್ಲಿರುವಚಾಂಚ್‌ ವಿಕ್ಟೋರಿಯಾ ಕಾಲೇರಿ ಪ್ರದೇಶದಲ್ಲಿಕಾರ್ಯಾಚರಣೆ ಸ್ಥಗಿತಗೊಂಡಿರುವ ‘ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ (ಬಿಸಿಸಿಎಲ್)’ನ ಕಲ್ಲಿದ್ದಲು ಗಣಿಯಲ್ಲಿ ಘಟನೆ ನಡೆದ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಅದರ ಅಧಿಕಾರಿಗಳು ಹೇಳಿದ್ದಾರೆ. ಈ ವಿಷಯದ ಬಗ್ಗೆ ಮಾಹಿತಿ ಪಡೆಯಲು ಧನ್‌ಬಾದ್‌ನ ಹಿರಿಯ ಪೊಲೀಸ್ ಅಧೀಕ್ಷಕರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಸಾಧ್ಯವಾಗಲಿಲ್ಲ.

ಫೆಬ್ರವರಿಯಲ್ಲಿ ಧನಬಾದ್‌ನ ಗೋಪಿನಾಥಪುರದಲ್ಲಿ ಅಕ್ರಮ ಗಣಿಗಾರಿಕೆ ನಡೆಯುವ ವೇಳೆ ಕುಸಿತ ಸಂಭವಿಸಿ ಕನಿಷ್ಠ ಐದು ಜನರು ಪ್ರಾಣ ಕಳೆದುಕೊಂಡಿದ್ದರು. ಘಟನೆಯ ತನಿಖೆಗಾಗಿ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.

ಕಳೆದ ನಾಲ್ಕು ವರ್ಷಗಳಲ್ಲಿ ನಿರ್ಸಾದಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಘಟನೆಗಳಲ್ಲಿ ಕನಿಷ್ಠ 24 ಮಂದಿ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.