ದಿಂಡಿಗಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ
(ಚಿತ್ರ ಕೃಪೆ–@PTI_News)
ಚೆನ್ನೈ(ತಮಿಳುನಾಡು): ದಿಂಡಿಗಲ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮಗು ಸೇರಿದಂತೆ ಕನಿಷ್ಠ 6 ಜನ ಮೃತಪಟ್ಟಿದ್ದಾರೆ.
ತಿರುಚ್ಚಿ ರಸ್ತೆಯಲ್ಲಿರುವ ಸಿಟಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಬೆಂಕಿಯಲ್ಲಿ ಸಿಲುಕಿದ್ದವರ ಪೈಕಿ 6 ಮಂದಿ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. 32 ಜನರನ್ನು ರಕ್ಷಿಸಲಾಗಿದ್ದು, ಡಿಂಡಿಗಲ್‌ನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಮತ್ತು ಅಗ್ನಿಶಾಮಕ ದಳದ ಮೂಲಗಳು ತಿಳಿಸಿವೆ.
6 ಮಂದಿ ಮೃತಪಟ್ಟ ಬಗ್ಗೆ ಅಗ್ನಿಶಾಮಕ ಮೂಲಗಳು ದೃಢಪಡಿಸಿವೆ. ಆದಾಗ್ಯೂ ಜಿಲ್ಲಾಧಿಕಾರಿ ಎಂ.ಎನ್ ಪೂಂಗೋಡಿ ಸಾವುನೋವುಗಳ ಬಗ್ಗೆ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
'ರಾತ್ರಿ 9ರ ಸುಮಾರಿಗೆ ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಮೂರನೇ ಮಹಡಿಗೂ ವ್ಯಾಪಿಸಿದೆ. ಸುಮಾರು ಒಂದು ಗಂಟೆ ಕಾಲ ದಟ್ಟ ಹೊಗೆ ಆವರಿಸಿತ್ತು. 32 ಜನರನ್ನು ರಕ್ಷಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಆಸ್ಪತ್ರೆಯ ಲಿಫ್ಟ್‌ನಲ್ಲಿ ಕೆಲವರು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ' ಎಂದು ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮೃತರ ಸಂಬಂಧಿಕರಿಗೆ ತಲಾ ₹3 ಲಕ್ಷ ಪರಿಹಾರ ಘೋಷಿಸಿದ್ದಾರೆ . ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಯಿಂದ (CMPRF)ಮೃತರ ಕುಟುಂಬಗಳಿಗೆ ತಲಾ ₹3 ಲಕ್ಷ, ಗಂಭೀರವಾಗಿ ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ ₹1 ಲಕ್ಷ ಹಾಗೂ ಸಣ್ಣ ಪುಟ್ಟ ಗಾಯಗಳಾದವರಿಗೆ ₹50,000 ನೆರವು ನೀಡುವುದಾಗಿ ಹೇಳಿದ್ದಾರೆ.
ಅಲ್ಲದೇ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆಯೂ ಸಿಎಂ ನಿರ್ದೇಶನ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.