ADVERTISEMENT

PM ಮೋದಿಯ ಗುಣಗಾನ ಮಾಡಿದ MP ತರೂರ್‌: ರಾಹುಲ್‌ ಗಾಂಧಿ ಕಾಲೆಳೆದ BJP

ಪಿಟಿಐ
Published 23 ಜೂನ್ 2025, 13:39 IST
Last Updated 23 ಜೂನ್ 2025, 13:39 IST
<div class="paragraphs"><p>ನರೇಂದ್ರ ಮೋದಿ, ಶಶಿ ತರೂರ್, ರಾಹುಲ್ ಗಾಂಧಿ</p></div>

ನರೇಂದ್ರ ಮೋದಿ, ಶಶಿ ತರೂರ್, ರಾಹುಲ್ ಗಾಂಧಿ

   

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಹೊಗಳಿರುವುದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿರುವ ಬಿಜೆಪಿ, ‘ತಿರುವನಂತರಪುರದ ಸಂಸದ ತಮ್ಮದೇ ಪಕ್ಷದ ನಾಯಕ ರಾಹುಲ್ ಗಾಂಧಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಬಿಜೆಪಿ ಕಾಲೆಳೆದಿದೆ.

‘ಮೋದಿ ಅವರ ಶಕ್ತಿ, ಕ್ರಿಯಾಶೀಲತೆ ಮತ್ತು ಎಲ್ಲದರಲ್ಲೂ ತೊಡಗಿಸಿಕೊಳ್ಳುವ ಅವರ ಸಾಮರ್ಥ್ಯವು ಜಾಗತಿಕ ವೇದಿಕೆಯಲ್ಲಿ ದೇಶದ ಬಹುದೊಡ್ಡ ಆಸ್ತಿಯಾಗಿದೆ. ಆದರೆ ಅದಕ್ಕೆ ಹೆಚ್ಚಿನ ಬೆಂಬಲ ಸಿಗಬೇಕಿದೆ’ ಎಂಬ ತರೂರ್ ಅವರ ಹೇಳಿಕೆಯು ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವುದರ ಜತೆಗೆ, ಪಕ್ಷದ ಮುಖಂಡರೊಂದಿಗೆ ಅವರು ಹೊಂದಿರುವ ಭಿನ್ನಾಭಿಪ್ರಾಯವನ್ನು ಇನ್ನಷ್ಟು ಹೆಚ್ಚಿಸಿದೆ.

ADVERTISEMENT

ದೇಶದ ವಿದೇಶಾಂಗ ನೀತಿಗಳ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಕಾಂಗ್ರೆಸ್ ಪಕ್ಷವು ನಿರಂತರ ದಾಳಿ ನಡೆಸುತ್ತಿರುವ ಸಂದರ್ಭದಲ್ಲೇ ತರೂರ್ ಅವರು ಮೋದಿ ಅವರನ್ನು ಹೊಗಳಿದ್ದು ಪಕ್ಷಕ್ಕೆ ತೀವ್ರ ಇರಿಸುಮುರಿಸು ಉಂಟುಮಾಡಿದೆ.

ಶಶಿ ತರೂರ್ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ‘ಪ್ರಧಾನಿ ಮೋದಿ ಅವರ ಕ್ರಿಯಾಶೀಲತೆ ಮತ್ತು ಜಾಗತಿಕ ಸಂಪರ್ಕವು ಭಾರತಕ್ಕೆ ರಚನಾತ್ಮಕ ಲಾಭವನ್ನು ತಂದುಕೊಡಬಲ್ಲದು ಎಂಬುದನ್ನು ಶಶಿ ತರೂರ್ ಒಪ್ಪಿಕೊಂಡಿದ್ದಾರೆ. ಆಮೂಲಕ ರಾಹುಲ್ ಗಾಂಧಿ ಏನೆಂಬುದನ್ನು ತರೂರ್ ತೋರಿಸಿಕೊಟ್ಟಿದ್ದಾರೆ’ ಎಂದಿದ್ದಾರೆ.

ತರೂರ್ ಅವರು ‘ದಿ ಹಿಂದೂ’ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ, ಆಪರೇಷನ್ ಸಿಂಧೂರ ನಂತರದಲ್ಲಿ ರಾಷ್ಟ್ರದ ಸಂಕಲ್ಪವನ್ನು ಅತ್ಯಂತ ಪರಿಣಾಮಕಾರಿ ಸಂವಹನದ ಮೂಲಕ ರಾಜತಾಂತ್ರಿಕ ಮಾರ್ಗದಲ್ಲೇ ಜಗತ್ತಿಗೆ ತಲುಪಿಸಲು ಸಾಧ್ಯವಾಯಿತು. ಇವೆಲ್ಲದಕ್ಕೂ ಪ್ರಧಾನಿ ಮೋದಿ ಅವರ ಶಕ್ತಿ, ಕ್ರಿಯಾಶೀಲತೆ ಮತ್ತು ಎಲ್ಲದರಲ್ಲೂ ತೊಡಗಿಸಿಕೊಳ್ಳುವ ಅವರ ಸಾಮರ್ಥ್ಯವು ಜಾಗತಿಕ ವೇದಿಕೆಯಲ್ಲಿ ದೇಶದ ಬಹುದೊಡ್ಡ ಆಸ್ತಿಯಾಗಿದೆ’ ಎಂದಿದ್ದರು.

'ದೇಶ ಒಗ್ಗಟ್ಟಾದಾಗ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಹೇಳುವುದನ್ನು ಇನ್ನೂ ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ ಹೇಳಲು ಸಾಧ್ಯ. ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಇದನ್ನು ಭಾರತವು ಜಗತ್ತಿಗೆ ತೋರಿಸಿಕೊಟ್ಟಿದೆ’ ಎಂದು ಅಮೆರಿಕ ಸಹಿತ ನಾಲ್ಕು ರಾಷ್ಟ್ರಗಳ ಭೇಟಿ ಮಾಡಿದ ನಿಯೋಗದ ನೇತೃತ್ವ ವಹಿಸಿದ್ದ ತರೂರ್‌ ಹೇಳಿದ್ದಾರೆ.

ಕಳೆದವಾರ ತಿರುವನಂತಪುರದಲ್ಲಿ ಮಾತನಾಡಿದ್ದ ತರೂರ್, ‘ಪಕ್ಷದ ನಾಯಕತ್ವದಲ್ಲಿರುವವರೊಂದಿಗೆ ನಾನು ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದ್ದೇನೆ. ಆದರೆ ಪಕ್ಷದ ಮೌಲ್ಯಗಳು ಹಾಗೂ ಕಾರ್ಯಕರ್ತರು ಸದಾ ನನ್ನ ಹೃದಯಕ್ಕೆ ಹತ್ತಿರದಲ್ಲಿದೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.