ತಿರುವನಂತಪುರ: ‘ಸುಮಾರು 3 ಸಾವಿರ ಜನರನ್ನು ಬಲಿಪಡೆದ 9/11 ದಾಳಿಯ ರೂವಾರಿ ಒಸಮಾ ಬಿನ್ ಲಾಡೆನ್ ಪಾಕಿಸ್ತಾನದ ಸೇನಾ ಶಿಬಿರದ ಬಳಿ ಅಡಗಿಕೊಂಡಿದ್ದ ಎಂಬುದನ್ನು ನೆನಪಿಸಿಕೊಳ್ಳಲಿ’ ಎಂದು ಸಂಸದ ಶಶಿ ತರೂರ್ ಹೇಳಿದ್ದಾರೆ.
– ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಶ್ವೇತಭವನದಲ್ಲಿ ನಡೆದ ಖಾಸಗಿ ಔತಣಕೂಟದಲ್ಲಿ ಪಾಕಿಸ್ತಾನ ಸೇನೆ ಮುಖ್ಯಸ್ಥ ಅಸೀಮ್ ಮುನೀರ್ ಭಾಗಿಯಾಗಿರುವುದರ ಬಗ್ಗೆ ತರೂರ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
‘ಪಾಕಿಸ್ತಾನದ ನಿಯೋಗವನ್ನು ಭೇಟಿ ಮಾಡುವ ಕೆಲ ಜನಪ್ರತಿನಿಧಿಗಳು, ಸೆನೆಟರ್‌ಗಳು ಸಾಮಾನ್ಯವಾಗಿ ಹೀಗೆ ನಡೆದುಕೊಳ್ಳುತ್ತಾರೆ. ಆದರೆ, ಒಸಮಾ ಬಿನ್ ಲಾಡೆನ್ ಅಧ್ಯಾಯವನ್ನು ಅಮೆರಿಕದ ಜನರು ಅಷ್ಟು ಬೇಗ ಮರೆಯಲು ಸಾಧ್ಯವಿಲ್ಲ. ಪಾಕಿಸ್ತಾನದ ಸೇನಾ ಶಿಬಿರದ ಬಳಿ ಆತ(ಲಾಡೆನ್) ಸುರಕ್ಷಿತವಾಗಿ ಅಡಗಿಕೊಂಡಿದ್ದ ಎಂಬುದನ್ನು ಅವರು ಕ್ಷಮಿಸಲೂ ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ಮುಂದುವರಿದು, ‘ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ನೀಡಲು ಟ್ರಂಪ್ ಅವರು ಈ ಅವಕಾಶವನ್ನು ಬಳಸಿಕೊಂಡಿರಬಹುದು ಎಂದು ನಾನು ನಂಬುತ್ತೇನೆ. ಭಾರತದ ನೆಮ್ಮದಿ ಕೆಡಿಸಲು ಅವರ(ಪಾಕಿಸ್ತಾನ) ನೆಲದಲ್ಲಿ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದು, ಶಸ್ತ್ರಾಸ್ತ್ರ ಒದಗಿಸುವುದು, ತರಬೇತಿ ನೀಡುವುದನ್ನು ನಿಲ್ಲಿಸುವಂತೆ ಟ್ರಂಪ್ ಎಚ್ಚರಿಕೆ ನೀಡಿರುತ್ತಾರೆ ಎಂದು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.
‘ಈ ಎಲ್ಲ ಸಂದೇಶಗಳು ಅವರಿಗೆ(ಮುನೀರ್) ತಲುಪಿದೆ ಎಂದು ನಂಬಿದ್ದೇನೆ. ಯಾಕೆಂದರೆ ಅದು ಅಮೆರಿಕದ ಹಿತಾಸಕ್ತಿಗೂ ಅಗತ್ಯವಾಗಿದೆ’ ಎಂದು ಹೇಳಿದ್ದಾರೆ.
ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಿದ್ದ ತರೂರ್, ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದರು. ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಭಾರತ ನಿಲುವನ್ನು ವಿವರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.