
ನವದೆಹಲಿ: ‘ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚೆಂಡನ್ನು ತಪ್ಪಿಸಿಕೊಂಡಂತೆ ಭಾಸವಾಗುತ್ತಿದೆ’ ಎಂದು ಕಾಂಗ್ರೆಸ್ ಹಿರಿಯ ಸಂಸದ ಶಶಿ ತರೂರ್ ಅವರು ಕೇಂದ್ರ ಬಜೆಟ್ ಅನ್ನು ಕ್ರಿಕೆಟ್ ಕಾಮೆಂಟರಿ ರೂಪದಲ್ಲಿ ಸಮಾಧಾನ ವ್ಯಕ್ತಪಡಿಸಿದ್ದಾರೆ.
2026–27ನೇ ಸಾಲಿನ ಕೇಂದ್ರ ಬಜೆಟ್ ಕುರಿತು ಪಿಟಿಐ ಜೊತೆ ಮಾತನಾಡಿದ ತರೂರ್ ಅವರು, ‘ಸೀತಾರಾಮನ್ ಅವರ ಬಜೆಟ್ ಭಾಷಣವು ಸಾಕಷ್ಟು ಉಪಶೀರ್ಷಿಕೆಗಳನ್ನು ಹೊಂದಿದೆ. ಆದರೆ ನಿರ್ದಿಷ್ಟತೆಗಳು ಕಡಿಮೆ ಇತ್ತು. ಒಟ್ಟಾರೆ ನೋಡುವುದಾದರೆ, ಬಜೆಟ್ ಸಂಪೂರ್ಣವಾಗಿ ಕಿರಿದಾದಂತೆ ಭಾಸವಾಯಿತು’ ಎಂದು ಹೇಳಿದ್ದಾರೆ.
ಕೇರಳದ ಸಂಸದರಾಗಿ, ನಮಗೆ ಈ ಬಜೆಟ್ ಅನ್ನು ಸ್ವಾಗತಿಸಲು ಏನೂ ಇಲ್ಲ. ಉದ್ಯೋಗ ಹೇಗೆ ಸೃಷ್ಟಿಸಬಹುದು ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ತರೂರ್ ಬೇಸರ ವ್ಯಕ್ತಪಡಿಸಿದ್ದಾರೆ.
ಹಣಕಾಸು ಸಚಿವರು ಅನಿರೀಕ್ಷಿತವಾಗಿ ಆಟವಾಡಿದ್ದಾರೆಯೇ ಅಥವಾ ಚೆಂಡನ್ನು ಸಂಪೂರ್ಣವಾಗಿ ಮಿಸ್ ಮಾಡಿಕೊಂಡು ಸ್ಟಂಪ್ ಆಗಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಸೀತಾರಾಮನ್ ಅವರು ಸ್ಟಂಪ್ ಆಗಿದ್ದಾರೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಆದರೆ ಅವರು ಖಂಡಿತವಾಗಿಯೂ ಚೆಂಡನ್ನು ಮಿಸ್ ಮಾಡಿಕೊಂಡಂತೆ ಕಾಣುತ್ತಿದೆ. ಒಂದು ಅಥವಾ ಎರಡು ವಿಭಾಗಗಳಲ್ಲಿ ಅವರು ಎಡ್ಜ್ ಆಗಿರಬಹುದು. ಆದರೆ ಒಟ್ಟಾರೆ ನೋಡುವುದಾದರೆ ನಾವು ಬ್ಯಾಟ್‌ನಿಂದ ಏನು ಪಡೆದುಕೊಂಡೆವು ಎಂಬುದು ತಿಳಿಯುತ್ತಿಲ್ಲ’ ಎಂದು ತರೂರ್ ಹೇಳಿದ್ದಾರೆ.
‘ದೊಡ್ಡ ವಿಚಾರಗಳ ಕುರಿತು ನೋಡುವುದಾದರೆ, ಬಜೆಟ್‌ನಲ್ಲಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರಿಗೆ ಯಾವುದೇ ಘೊಷಣೆಗಳು ಆಗಿರುವುದು ನನ್ನ ಕಿವಿಗೆ ಬಿದ್ದಿಲ್ಲ. ರಾಜ್ಯಗಳಿಗೂ ಏನೂ ಸಿಕ್ಕಿರುವಂತೆ ಕಾಣಿಸಿಲ್ಲ. ವಾಸ್ತವವಾಗಿ, ಹಣಕಾಸಿನ ವಿಕೇಂದ್ರೀಕರಣ ಶೇ 41ರಲ್ಲೇ ಉಳಿದಿದೆ. ಅನೇಕ ರಾಜ್ಯಗಳು ತಮ್ಮ ನಾಗರಿಕರಿಗೆ ಬೇಡಿಕೆಗಳನ್ನು ಪೂರೈಸಲು ಅಗತ್ಯವಾದಷ್ಟು ಅನುದಾನ ನೀಡಿಲ್ಲ ಎಂದು ದೂರಿವೆ’ ಎಂದು ಆರೋಪಿಸಿದರು.
‘ನಿರ್ಮಲಾ ಅವರು ಘೋಷಣೆ ಮಾಡಿರುವ ಬಜೆಟ್‌ನಲ್ಲಿ ಯಾವುದೇ ಹೊಸ ಯೋಜನೆಗಳಿಲ್ಲ. ಉದಾಹರಣೆಗೆ ಕೇರಳ ರಾಜ್ಯಕ್ಕೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೇಕು ಎಂಬುದು ಕಳೆದ 15 ವರ್ಷಗಳ ಬೇಡಿಕೆ. ಆದರೆ ಬಜೆಟ್‌ನಲ್ಲಿ ಆ ರೀತಿಯ ಯಾವುದೇ ಘೋಷಣೆ ಮಾಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಅಖಿಲ ಭಾರತ ಆಯುರ್ವೇದ ಸಂಸ್ಥೆ ಸ್ಥಾಪನೆಯ ಕುರಿತು ಉಲ್ಲೇಖವಿದೆ. ಆದರೆ, ಅದನ್ನು ಎಲ್ಲಿ ಸ್ಥಾಪಿಸಲಾಗುತ್ತದೆ ಎಂಬುದರ ಮಾಹಿತಿ ನೀಡಿಲ್ಲ. ವಿಶೇಷವಾಗಿ ಆಯುರ್ವೇದದ ಪ್ರಮುಖ ಕೇಂದ್ರವಾಗಿ ಕೇರಳವನ್ನು ಘೋಷಿಸಬೇಕೆಂಬ ಬೇಡಿಕೆ ಇತ್ತು. ಆದರೆ, ಅವರು ನಮಗೆ ಆ ಭರವಸೆಯನ್ನು ಈಡೇರಿಸಿಲ್ಲ’ ಎಂದು ತಿರುವನಂತಪುರಂ ಸಂಸದರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.