ಶಿಬು ಸೊರೇನ್ ಅವರ ಪಾರ್ಥಿವ ಶರೀರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನಮಸ್ಕರಿಸಿದರು.
ಪಿಟಿಐ ಚಿತ್ರ
ರಾಂಚಿ: ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಸ್ಥಾಪಕ, ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಅವರ ಪಾರ್ಥಿವ ಶರೀರವನ್ನು ಇಂದು (ಸೋಮವಾರ) ಸಂಜೆ ದೆಹಲಿಯಿಂದ ರಾಂಚಿಗೆ ತರಲಾಗುವುದು ಎಂದು ಜೆಎಂಎಂ ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಸ್ಥಾಪಕ, ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಇಂದು ನಿಧನರಾದರು.
ಶಿಬು ಅವರ ಪಾರ್ಥಿವ ಶರೀರವನ್ನು ಸಂಜೆ 5.30ರ ಸುಮಾರಿಗೆ ರಾಂಚಿಗೆ ತರಲಾಗುವುದು. ಇಂದು ಅವರ ಪಾರ್ಥಿವ ಶರೀರವನ್ನು ಮೊರಾಬಾದಿಯ ಅವರ ನಿವಾಸದಲ್ಲಿ ಇರಿಸಲಾಗುವುದು. ನಾಳೆ (ಮಂಗಳವಾರ) ಬೆಳಿಗ್ಗೆ ರಾಮಗಢ ಜಿಲ್ಲೆಯ ಅವರ ಹುಟ್ಟೂರು ನೆಮ್ರಾಗೆ ಕೊಂಡೊಯ್ಯಲಾಗುವುದು. ಅಲ್ಲಿ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಜೆಎಂಎಂ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಸುಪ್ರಿಯೋ ಭಟ್ಟಾಚಾರ್ಯ ತಿಳಿಸಿದ್ದಾರೆ.
ಪಕ್ಷಕ್ಕೆ ಮತ್ತು ಜಾರ್ಖಂಡ್‌ನ ಬುಡಕಟ್ಟು ಸಮುದಾಯ ಸೇರಿದಂತೆ ಎಲ್ಲ ಜನಾಂಗದವರಿಗೂ ಶಿಬು ಅವರ ನಿಧನ ತುಂಬಲಾರದ ನಷ್ಟವಾಗಿದೆ. ತುಳಿತಕ್ಕೊಳಗಾದವ ಪರ ಸದಾ ಧನಿಯಾಗಿದ್ದ ಅವರು, ಪ್ರತ್ಯೇಕ ಜಾರ್ಖಂಡ್ ರಚನೆಗೆ ಶ್ರಮಿಸಿದವರು ಎಂದರು.
ಅಜ್ಞಾನದ ವಿರುದ್ಧ ಶಿಕ್ಷಣದ ಮಾರ್ಗವನ್ನು, ಶೋಷಣೆಯ ವಿರುದ್ಧ ಹೋರಾಡುವ ಮಾರ್ಗವನ್ನು ನಮ್ಮೆಲ್ಲರಿಗೂ ತೋರಿಸಿಕೊಟ್ಟವರು ಎಂದು ಪಕ್ಷದ ನಾಯಕರು ಹೇಳಿದ್ದಾರೆ.
ಏತನ್ಮಧ್ಯೆ, ಇಂದು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಶಿಬು ಸೊರೆನ್ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಪಕ್ಷದ ಧ್ವಜವನ್ನು ಅರ್ಧಕ್ಕೆ ಇಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.