ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಪುಣೆ: ಸರಪಂಚ್ ಸಂತೋಷ್ ದೇಶಮುಖ್ ಅವರ ಹತ್ಯೆಯನ್ನು ಖಂಡಿಸಿ ಶಿವಸೇನಾ ಕಾರ್ಯಕರ್ತರು ಇಂದು (ಮಂಗಳವಾರ) ಪ್ರತಿಭಟನೆ ನಡೆಸಿದ್ದು, ಅಪರಾಧದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದೆ.
ಶಿವಸೇನಾ ಪಕ್ಷದ ಪುಣೆ ಘಟಕದ ಅಧ್ಯಕ್ಷ ಪ್ರಮೋದ್ ಭಂಗೈರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರತಿಭಟನೆಯ ವೇಳೆ ಕಾರ್ಯಕರ್ತರು ಸಚಿವ ಧನಂಜಯ ಮುಂಡೆ ಅವರ ಆಪ್ತ ವಾಲ್ಮಿಕ್ ಕರಾಡ್ ಅವರ ಪ್ರತಿಕೃತಿಯನ್ನು ದಹಿಸಿದರು.
ದೇಶಮುಖ್ ಅವರನ್ನು ಕ್ರೂರವಾಗಿ ಕೊಲ್ಲಲಾಗಿದ್ದು, ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಭಂಗೈರೆ ಹೇಳಿದರು.
ಠಾಣೆಯಲ್ಲಿಯೂ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಠಾಣೆ ಸಂಸದ ನರೇಶ್ ಮಾಸ್ಕೆ ಮತ್ತು ಮಾಜಿ ಮೇಯರ್ ಮೀನಾಕ್ಷಿ ಶಿಂದೆ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ದೇಶಮುಖ್ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಫಲಕಗಳನ್ನು ಹಿಡಿದು ಪ್ರತಿಭಟನಾಕಾರರು ಪ್ರತಿಭಟಿಸಿದರು.
ಬೀಡ್‌ನ ಮಸ್ಸಾಜೋಗ್ ಗ್ರಾಮದ ಸರಪಂಚ್ ಆಗಿದ್ದ ಸಂತೋಷ್ ದೇಶಮುಖ್ ಅವರನ್ನು ಕಳೆದ ವರ್ಷ ಡಿಸೆಂಬರ್ 6ರಂದು ಅಪಹರಿಸಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು.
ದೇಶಮುಖ್ ಕೊಲೆ ಪ್ರಕರಣದಲ್ಲಿ ಸಚಿವ ಧನಂಜಯ ಮುಂಡೆ ಅವರ ಆಪ್ತ ವಾಲ್ಮಿಕ್ ಕರಾಡ್ ಅವರನ್ನು ಪ್ರಮುಖ ಆರೋಪಿ ಎಂದು ಸಿಐಡಿ ಹೆಸರಿಸಿತ್ತು.
ತಮ್ಮ ಆಪ್ತನ ಹೆಸರು ಕೇಳಿ ಬಂದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಧನಂಜಯ ಮುಂಡೆ ಅವರು ಇಂದು (ಮಂಗಳವಾರ) ರಾಜೀನಾಮೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.