ADVERTISEMENT

ಮೋದಿ ಜತೆ ಮಾತುಕತೆ ಸಮಯ ಹಾಳೆಂದು ಭಾವಿಸಿದ್ದಾರೆ ಪಿಣರಾಯಿ: ಬಿಜೆಪಿಗೆ ಶಿವಸೇನಾ

ಕೇರಳ ಮಾದರಿ ಜತೆ ಹೋಲಿಸಿದ್ದಕ್ಕೆ ತಿರುಗೇಟು

ಏಜೆನ್ಸೀಸ್
Published 22 ಮೇ 2020, 10:47 IST
Last Updated 22 ಮೇ 2020, 10:47 IST
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ   

ಮುಂಬೈ: ಕೋವಿಡ್–19 ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಿಜೆಪಿ ಮಾಡುತ್ತಿರುವ ಅಪಪ್ರಚಾರ ಆ ಪಕ್ಷಕ್ಕೇ ತಿರುಗುಬಾಣವಾಗಲಿದೆ ಎಂದು ಆಡಳಿತಾರೂಢ ಶಿವಸೇನಾ ಹೇಳಿದೆ.

ಸಾಂಕ್ರಾಮಿಕವನ್ನು ಮಹಾರಾಷ್ಟ್ರ ಸರ್ಕಾರವು ನಿರ್ವಹಿಸುತ್ತಿರುವ ರೀತಿಯನ್ನು ಬಿಜೆಪಿಯ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್‌ ಕೇರಳ ಮಾದರಿ ಜತೆ ಹೋಲಿಸಿ ಟೀಕಿಸಿದ್ದರು. ಇದಕ್ಕೆ ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಶಿವಸೇನಾ ತಿರುಗೇಟು ನೀಡಿದೆ.

‘ಪಾಟೀಲ್ ಅವರು ಕೇರಳ ಮಾದರಿಯನ್ನು ಸರಿಯಾಗಿ ಅಧ್ಯಯನ ಮಾಡಿಲ್ಲ ಅನಿಸುತ್ತಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರ ಸರ್ಕಾರದ ಮಾರ್ಗದರ್ಶಿಯನ್ನು ಪಾಲಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಜತೆಗಿನ ವಿಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸುವುದೆಂದರೆ ಸಮಯ ವ್ಯರ್ಥಗೊಳಿಸಿದಂತೆ ಎಂದು ಅವರು ಭಾವಿಸಿದ್ದಾರೆ’ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆಸುವ ಬದಲು ಚಂದ್ರಕಾಂತ್ ಪಾಟೀಲ್ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಕೇರಳದಲ್ಲಿ ಪ್ರತಿಭಟನೆ ನಡೆಸಲಿ ಎಂದೂ ಸೇನಾ ಹೇಳಿದೆ.

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಇದೆ ಮತ್ತು ಪ್ರಧಾನಿ ಮೋದಿಯವರು ಅದರ ವಿರುದ್ಧ ಹೋರಾಡಲು ಪ್ರಯತ್ನಿಸುತ್ತಿದ್ದಾರೆ ಎಂದೂ ಸಂಪಾದಕೀಯದಲ್ಲಿ ಹೇಳಲಾಗಿದೆ.

‘ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರತಿಪಕ್ಷವು ಏನಾದರೂ ಸಲಹೆಗಳನ್ನು ನೀಡುವುದಿದ್ದಲ್ಲಿ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಲಿ. ಹೀಗೆ ಮಾಡಲು ಪ್ರತಿಪಕ್ಷಕ್ಕೆ ಮುಜುಗರವಾಗುತ್ತದೆಯೇ ಅಥವಾ ಆತ್ಮವಿಶ್ವಾಸವಿಲ್ಲವೇ’ ಎಂದು ಸೇನಾ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.