ಅಜಿತ್ ಪವಾರ್, ದೇವೇಂದ್ರ ಫಡಣವೀಸ್, ಏಕನಾಥ ಶಿಂದೆ
ಪಿಟಿಐ ಚಿತ್ರ
ಮುಂಬೈ: ಖಾತೆ ಹಂಚಿಕೆ ವಿಚಾರವಾಗಿ ಮಹಾರಾಷ್ಟ್ರದ ‘ಮಹಾಯುತಿ ಮೈತ್ರಿಕೂಟ’ದಲ್ಲಿ ಚರ್ಚೆಗಳು ಜೋರಾಗಿ ನಡೆದಿವೆ, ತನಗೆ ಗೃಹ ಖಾತೆಯೇ ಬೇಕು ಎಂದು ಶಿವಸೇನಾ ಪಟ್ಟು ಹಿಡಿದಿದೆ. ಸಚಿವ ಸಂಪುಟದಲ್ಲಿ ಯಾರಿರುತ್ತಾರೆ, ಯಾವ ಖಾತೆಯನ್ನು ಯಾರಿಗೆ ನೀಡಲಾಗುತ್ತದೆ ಎಂಬ ಬಗ್ಗೆ ಭಾನುವಾರದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಬಹುದು ಎಂದು ಮೂಲಗಳು ಹೇಳಿವೆ.
ದೇವೇಂದ್ರ ಫಡಣವೀಸ್ ನೇತೃತ್ವದ ಸರ್ಕಾರವು ಡಿಸೆಂಬರ್ 11ರಂದು ಸಂಪುಟ ವಿಸ್ತರಣೆ ಮಾಡುವ ನಿರೀಕ್ಷೆ ಇದೆ.
ಫಡಣವೀಸ್ ನೇತೃತ್ವದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಏಕನಾಥ ಶಿಂದೆ ಅವರು ಒಪ್ಪಿಕೊಂಡ ನಂತರ, ಉದಯ್ ಸಾಮಂತ್ ಮತ್ತು ಸಂಜಯ್ ಶಿರಸಾಟ್ ಅವರಂತಹ ಮುಖಂಡರು ಶಿವಸೇನಾ ಪಕ್ಷಕ್ಕೆ ಗೃಹ ಖಾತೆಯನ್ನೇ ನೀಡಬೇಕು ಎಂದು ಬಹಿರಂಗವಾಗಿ ಆಗ್ರಹಿಸಿದ್ದಾರೆ.
ಸಂಪುಟದಲ್ಲಿ ಯಾರಿರಬೇಕು, ಯಾವ ಖಾತೆಯನ್ನು ಯಾರಿಗೆ ಹಂಚಿಕೆ ಮಾಡಬೇಕು ಎಂಬ ಬಗ್ಗೆ ‘ಮಹಾಯುತಿ ಮೈತ್ರಿಕೂಟ’ದ ಪಕ್ಷಗಳ ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ಬಿಜೆಪಿ ಮತ್ತು ಎನ್‌ಸಿಪಿ ಮೂಲಗಳು ಮಾಹಿತಿ ನೀಡಿವೆ.
‘ಮಹಾಯುತಿ ಮೈತ್ರಿಕೂಟ’ದ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಯು ಸಂಪುಟದಲ್ಲಿ ಮುಖ್ಯಮಂತ್ರಿ ಸ್ಥಾನ ಸೇರಿ 21–22 ಸ್ಥಾನಗಳನ್ನು ಇರಿಸಿಕೊಳ್ಳುವ ನಿರೀಕ್ಷೆ ಇದೆ. ಶಿವಸೇನಾ ಪಕ್ಷಕ್ಕೆ 11–12 ಹಾಗೂ ಎನ್‌ಸಿಪಿಗೆ 9–10 ಸ್ಥಾನಗಳು ಸಿಗಬಹುದು ಎನ್ನಲಾಗಿದೆ. ಮಹಾರಾಷ್ಟ್ರ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿ 43 ಸದಸ್ಯರು ಇರಬಹುದು.
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಎಷ್ಟು ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ತೀರ್ಮಾನವನ್ನು ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.