ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನಾ-ಎನ್‌ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಉದ್ಧವ್ ಠಾಕ್ರೆ ಉದ್ಯುಕ್ತರಾಗಿರುವ ಬೆನ್ನಲ್ಲೇ 'ತತ್ವ ಸಿದ್ಧಾಂತಗಳಿಗೆ ವಿರುದ್ಧವಾದ ಪಕ್ಷದೊಂದಿಗೆ ಕೈಜೋಡಿಸಿರುವ ಕ್ರಮ ವಿರೋಧಿಸಿ' ಶಿವಸೇನಾದ ಯುವಘಟಕದ ಮುಖಂಡ ರಮೇಶ್ ಸೋಲಂಕಿ ಅವರು ಟ್ವೀಟ್ ಮೂಲಕ ರಾಜೀನಾಮೆಯನ್ನು ಘೋಷಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುತ್ತಿರುವುದಕ್ಕಾಗಿ ಶುಭಾಶಯಗಳು ಮತ್ತು ಶಿವಸೇನಾ ಮುಖ್ಯಮಂತ್ರಿಯನ್ನು ಹೊಂದಿದ್ದಕ್ಕಾಗಿ ಅಭಿನಂದನೆಗಳು. ನನ್ನ ಮನಸ್ಸಾಕ್ಷಿ ಮತ್ತು ಸಿದ್ಧಾಂತಗಳು ಕಾಂಗ್ರೆಸ್‌ನೊಂದಿಗೆ ಕೆಲಸ ಮಾಡಲು ಒಪ್ಪುತ್ತಿಲ್ಲ. ಅರೆಮನಸ್ಸಿನಿಂದ ಕೆಲಸ ಮಾಡಲು ಸಾಧ್ಯವಿಲ್ಲ ಮತ್ತು ನನ್ನ ಹುದ್ದೆ, ನನ್ನ ಪಕ್ಷದ ಶಿವ ಸೈನಿಕರು ಮತ್ತು ನಾಯಕರಿಗೆ ಶೋಭೆ ತರುವಂತದ್ದಲ್ಲ ಎಂದು ಸೋಲಂಕಿ ಟ್ವೀಟ್ ಮಾಡಿದ್ದಾರೆ.
https://www.prajavani.net/stories/national/shiv-sena-leader-quits-over-tie-up-with-congress-685672.html
ಭಾರವಾದ ಹೃದಯದೊಂದಿಗೆ ನನ್ನ ಜೀವನದ ಅತೀಕಷ್ಟದ ನಿರ್ಧಾರವನ್ನು ಕೈಗೊಳ್ಳುತ್ತಿದ್ದೇನೆ. ಶಿವಸೇನಾಗೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಕಳೆದ 21 ವರ್ಷಗಳಿಂದ ವಿಶೇಷ ಬಾಂಧವ್ಯವನ್ನು ಹೊಂದಿರುವ ಎಲ್ಲ ಶಿವ ಸೈನಿಕರು ನನ್ನ ಸೋದರರು ಮತ್ತು ಸೋದರಿಯರಾಗೇ ಇರುತ್ತಾರೆ. ನಾನು ಯಾವಾಗಲೂ ಬಾಳಾಸಾಹೇಬರ ಶಿವ ಸೈನಿಕನಾಗೇ ಉಳಿದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, 1992ರಲ್ಲಿ ಬಾಳಾ ಸಾಹೇಬ್ ಠಾಕ್ರೆ ಅವರ ನಿರ್ಭೀತ ನಾಯಕತ್ವ ಮತ್ತು ವರ್ಚಸ್ಸನ್ನು ನೋಡಿ ನನ್ನ 12ನೇ ವಯಸ್ಸಿನಲ್ಲಿ ತನು ಮನದಲ್ಲಿಯೂ ಬಾಳಾ ಸಾಹೇಬ್ ಅವರಿಗಾಗಿ ಕೆಲಸ ಮಾಡಬೇಕು ಎಂದು ನಿರ್ಧರಿಸಿದ್ದೆ. 1998ರಲ್ಲಿ ನಾನು ಶಿವಸೇನಾಗೆ ಸೇರಿದೆ. ಅಂದಿನಿಂದ ಇಂದಿನವರೆಗೂ ಬಾಳಾ ಸಾಹೇಬರ ಹಿಂದುತ್ವದ ಸಿದ್ಧಾಂತದ ಆಧಾರದಲ್ಲಿ ಪಕ್ಷದ ಹಲವು ಹುದ್ದೆಗಳನ್ನು ಮತ್ತು ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, ಬಿಎಂಸಿ, ವಿಧಾನಸಭಾ ಮತ್ತು ಲೋಕಸಭಾ ಸೇರಿ ಹಲವು ಚುನಾವಣೆಗಳಲ್ಲಿ ಹಿಂದುತ್ವ ರಾಷ್ಟ್ರ ಎಂಬ ಕನಸು ಮತ್ತು ಕಾಂಗ್ರೆಸ್ ಮುಕ್ತ ಭಾರತದ ಗುರಿಯೊಂದಿಗೆ ಕೆಲಸ ಮಾಡಿದ್ದೇನೆ. 21 ವರ್ಷದಲ್ಲಿ ನಾನೆಂದಿಗೂ ಯಾವುದೇ ಹುದ್ದೆ, ಸ್ಥಾನಮಾನ ಮತ್ತು ಟಿಕೆಟ್ ನೀಡುವಂತೆ ಬೇಡಿಕೆಯಿಟ್ಟಿಲ್ಲ. ಹಗಲು ರಾತ್ರಿಯೆನ್ನದೆ ಇಂದಿನವರೆಗೂ ನಾನು ಕೇವಲ ಪಕ್ಷದ ಕೆಲಸಗಳನ್ನು ಮಾಡಿದ್ದೇನೆ ಎಂದು ತಿಳಿಸಿದರು.
ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವ ಶಿವಸೇನಾ ಮತ್ತು ಕಾಂಗ್ರೆಸ್ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಮುಂದಾಗಿದಾಗಿನಿಂದಲೂ ಸೋಲಂಕಿ ಅಸಮಾಧಾನಕ್ಕೊಳಗಾಗಿದ್ದರು. ಸೋಲಂಕಿ ಶಿವಸೇನಾದೊಂದಿಗೆ ಕಳೆದ 21 ವರ್ಷಗಳಿಂದಲೂ ಇದ್ದಾರೆ ಮತ್ತು ಅನೇಕ ಏರಿಳಿತಗಳನ್ನು ಕಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.