ಸಾಂದರ್ಭಿಕ ಚಿತ್ರ
ಮುಜಫ್ಫರ್‌ನಗರ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ಲೂಧಾವಾಲದಲ್ಲಿನ ಶಿವನ ದೇಗುಲವನ್ನು ಸುಮಾರು 31 ವರ್ಷಗಳ ಬಳಿಕ ಸೋಮವಾರ ತೆರೆಯಲಾಗಿದೆ.
ಈ ಶಿವ ದೇಗುಲವನ್ನು 1971ರಲ್ಲಿ ನಿರ್ಮಿಸಲಾಗಿತ್ತು. 1992ಲ್ಲಿ ನಡೆದ ಅಯೋಧ್ಯೆ ಗಲಭೆಯ ವೇಳೆ ಸ್ಥಳೀಯ ಹಿಂದೂಗಳು ದೇಗುಲದ ಮೂರ್ತಿ ಮತ್ತು ಶಿವಲಿಂಗವನ್ನು ತೆಗೆದುಕೊಂಡು ವಲಸೆ ಹೋಗಿದ್ದರು. ಆ ಬಳಿಕ ದೇಗುಲ ಮುಚ್ಚಿತ್ತು.
‘ಯಾವುದೇ ವಿಘ್ನಗಳಿಲ್ಲದೇ ಎಲ್ಲ ಕಾರ್ಯಕ್ರಮಗಳು ನಡೆದವು. ಸ್ವಾಮಿ ಯಶ್ವೀರ್ ಮಹಾರಾಜರ ನೇತೃತ್ವದಲ್ಲಿ ಹಿಂದೂಗಳು ಶಾಂತಿಯುತವಾಗಿ ಈ ಪ್ರದೇಶಕ್ಕೆ ಮರಳಿದರು’ ಎಂದು ನಗರ ಮ್ಯಾಜಿಸ್ಟ್ರೇಟ್ ವಿಕಾಸ್ ಕಶ್ಯಪ್ ಅವರು ತಿಳಿಸಿದ್ದಾರೆ.
ದೇಗುಲಕ್ಕೆ ಆಗಮಿಸಿದ ಹಿಂದೂಗಳ ಮೆರವಣಿಗೆಗೆ ಪುಷ್ಪವೃಷ್ಟಿ ಮಾಡುವ ಮೂಲಕ ಮುಸ್ಲಿಮರು ಸ್ವಾಗತಿಸಿದರು.
‘ಹಲವು ವರ್ಷಗಳಿಂದ ಮುಚ್ಚಿದ್ದ ದೇಗುಲವನ್ನು ಹವನದ ಮೂಲಕ ಶುದ್ಧೀಕರಣ ಮಾಡಿ ತೆರೆಯಲಾಯಿತು’ ಎಂದು ಸ್ವಾಮಿ ಯಶ್ವೀರ್ ಮಹಾರಾಜರು ಹರ್ಷ ವ್ಯಕ್ತಪಡಿಸಿದರು.
ಸಂಭಲ್‌ನಲ್ಲಿ 46 ವರ್ಷಗಳಿಂದ ಮುಚ್ಚಿದ್ದ ಹಿಂದೂ ದೇಗುಲವನ್ನು ಡಿ.13ರಂದು ತೆರೆಯಲಾಗಿದ್ದು, ಆ ಪ್ರದೇಶದಲ್ಲಿ ಉತ್ಖನನ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.