ADVERTISEMENT

2 ವರ್ಷದ ಹಿಂದೆಯೇ ತುಂಡು ತುಂಡು ಮಾಡುವುದಾಗಿ ಶ್ರದ್ಧಾಗೆ ಬೆದರಿಸಿದ್ದ ಆಫ್ತಾಬ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2022, 11:32 IST
Last Updated 26 ನವೆಂಬರ್ 2022, 11:32 IST
   

ನವದೆಹಲಿ: ಅಫ್ತಾಬ್‌ ಪೂನಾವಾಲ ನನ್ನನ್ನು ಕೊಂದು ತುಂಡು ತುಂಡು ಮಾಡಿ ಎಸೆಯುವುದಾಗಿ ಬೆದರಿಕೆ ಹಾಕಿದ್ದ ಎಂದು ಶ್ರದ್ಧಾ ವಾಲ್ಕರ್‌ ಎರಡು ವರ್ಷದ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಫ್ಲಾಟ್‌ನಲ್ಲಿ ಅಫ್ತಾಬ್‌, ಶ್ರದ್ಧಾ ಮೇಲೆ ದಾಳಿ ಮಾಡಿದ್ದ. ಈ ಬಗ್ಗೆ ಶ್ರದ್ಧಾ ತಮ್ಮ ತವರು ಗ್ರಾಮ ಮಹಾರಾಷ್ಟ್ರದ ವಾಸೈನ ತಿಲುಂಜ್‌ ಪೊಲೀಸ್‌ ಠಾಣೆಯಲ್ಲಿ 2020ರ ನವೆಂಬರ್‌ 23 ರಂದು ದೂರು ದಾಖಲಿಸಿದ್ದರು. ಈ ಪ‍ತ್ರದಲ್ಲಿ ಅಫ್ತಾಬ್ ತನ್ನನ್ನು ಕೊಂದು, ತುಂಡು ತುಂಡು ಮಾಡಿ ಎಸೆಯುವ ಬೆದರಿಕೆ ಹಾಕಿದ್ದ ಎಂದು ಶ್ರದ್ಧಾ ಹೇಳಿದ್ದರು.

‘ನಮ್ಮ ನಡುವೆ ಯಾವುದೇ ಜಗಳ ಇಲ್ಲ‘ ಎಂದು ಬಳಿಕ ಶ್ರದ್ಧಾ ದೂರನ್ನು ಹಿಂಪಡೆದಿದ್ದರು.

ಅಫ್ತಾಬ್‌ನ ಹಿಂಸಾತ್ಮಕ ನಡವಳಿಕೆ ಬಗ್ಗೆ ಮನೆಯವರ ಗಮನಕ್ಕೂ ಬಂದಿತ್ತು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಘಟನೆಯನ್ನು ತನ್ನ ಸಹೋದ್ಯೋಗಿ ಕರಣ್ ಎಂಬವರೊಂದಿಗೆ ಶ್ರದ್ಧಾ ಹಂಚಿಕೊಂಡಿದ್ದರು. ಅಫ್ತಾಬ್‌ ಹಲ್ಲೆಯಿಂದ ಉಂಟಾದ ಗಾಯದ ಫೋಟೋವನ್ನೂ ಕಳುಹಿಸಿದ್ದರು. ಅಲ್ಲದೇ ‘ಆಂತರಿಕ ಗಾಯ‘ದಿಂದಾಗಿ ಒಂದು ವಾರ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದಿದ್ದರು ಎನ್ನುವುದು ತನಿಖಾಧಿಕಾರಿಗಳು ನೀಡಿದ ಮಾಹಿತಿ.

‘ಇವತ್ತು ನನ್ನನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಪ‍್ರಯತ್ನ ಮಾಡಿದ. ನನ್ನನ್ನು ಕೊಲೆ ಮಾಡಿ, ತುಂಡು ತುಂಡು ಮಾಡಿ ಎಸೆಯುತ್ತೇನೆ ಎಂದು ಬೆದರಿಕೆ ಹಾಕಿದ. ನನ್ನ ಮೇಲೆ ಆತ ಹಲ್ಲೆ ಮಾಡಲು ಶುರು ಮಾಡಿ ಆರು ತಿಂಗಳು ಆಯ್ತು. ನನ್ನನ್ನು ಕೊಲೆ ಮಾಡುತ್ತೇನೆ ಎಂದು ಅವನು ಬೆದರಿಕೆ ಹಾಕಿದ್ದರಿಂದ ನನಗೆ ಪೊಲೀಸ್‌ ದೂರು ನೀಡಲು ಭಯ ಆಗಿತ್ತು‘ ಎಂದು ಶ್ರದ್ಧಾ ಕರಣ್‌ರೊಂದಿಗೆ ಹೇಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ..

2019ರಲ್ಲಿ ಡೇಟಿಂಗ್‌ ಆ್ಯಪ್‌ ಮೂಲಕ ಪರಿಚಿತರಾಗಿದ್ದ ಅಫ್ತಾಬ್ ಹಾಗೂ ಶ್ರದ್ದಾ, 2020ರ ಗಲಾಟೆ ಬಳಿಕವೂ ಒಟ್ಟಿಗೆ ಇದ್ದರು. ಈ ವರ್ಷದ ಆರಂಭದಲ್ಲಿ ದೆಹಲಿಗೆ ಸ್ಥಳಾಂತರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.