ಠಾಣೆ: ಮಹಾರಾಷ್ಟ್ರದ ನಿರ್ಗಮಿತ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಪುತ್ರ ಹಾಗೂ ಶಿವಸೇನಾ ಸಂಸದ ಶ್ರೀಕಾಂತ್ ಶಿಂದೆ ಅವರು ಮಹಾಯುತಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಪಡೆಯುತ್ತಾರೆ ಎಂಬ ಊಹಾಪೋಹಗಳು ದಾರಿದಾಡುತ್ತಿವೆ. ಇದಕ್ಕೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಶ್ರೀಕಾಂತ ಶಿಂದೆ ಊಹಾಪೋಹಗಳು ಸುಳ್ಳು ಹಾಗೂ ಆಧಾರರಹಿತ ಎಂದು ಹೇಳಿದ್ದಾರೆ.
‘ಮಹಾಯುತಿ’ ಮೈತ್ರಿಕೂಟ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸ್ವಲ್ಪ ವಿಳಂಬವಾಗಿದೆ. ಇದರಿಂದ ಸಾಕಷ್ಟು ಚರ್ಚೆಗಳು ಮತ್ತು ವದಂತಿಗಳು ಹುಟ್ಟಿಕೊಂಡಿವೆ. ನಾನು ಉಪಮುಖ್ಯಮಂತ್ರಿಯಾಗುತ್ತೇನೆ ಎಂಬ ಸುದ್ದಿ ಕಳೆದ ಎರಡು ದಿನಗಳಿಂದ ಹರಿದಾಡುತ್ತಿದೆ. ಆದರೆ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಎಲ್ಲಾ ಸುದ್ದಿಗಳು ಆಧಾರ ರಹಿತ ಎಂದು ಅವರು ಎಕ್ಸ್‌ನಲ್ಲಿ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಬಳಿಕ ಕೇಂದ್ರ ಸರ್ಕಾರದಲ್ಲಿ ಸಚಿವನಾಗುವ ಅವಕಾಶ ಸಿಕ್ಕಿತ್ತು. ಆದರೆ ಅದನ್ನು ತಿರಸ್ಕರಿಸಿ ಪಕ್ಷ ಸಂಘಟನೆಗಾಗಿ ಕೆಲಸ ಮಾಡುವತ್ತ ಹೆಚ್ಚು ಗಮನ ಹರಿಸಿದ್ದೇನೆ. ನಾನು ರಾಜ್ಯದಲ್ಲಿ ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ ಎಂದಿದ್ದಾರೆ.
ಮಹಾಯುತಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಡಿಸೆಂಬರ್ 5ರಂದು ನಿಗದಿಯಾಗಿದೆ. ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡಣವೀಸ್ ಅವರ ಹೆಸರು ಅಂತಿಮಗೊಂಡಿದೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಭಾನುವಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.