
ಹರ್‌ದೀಪ್ ಸಿಂಗ್ ಪುರಿ –ಪಿಟಿಐ ಚಿತ್ರ
ನವದೆಹಲಿ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಸಿಖ್ ವಿರೋಧಿ ದಂಗೆಗಳು ಕಪ್ಪು ಕಲೆಗಳಲ್ಲಿ ಒಂದಾಗಿವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್‌ದೀಪ್ ಸಿಂಗ್ ಪುರಿ ಗತಕಾಲದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಇಂದು (ಶುಕ್ರವಾರ) ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯತಿಥಿ. ಈ ಹಿನ್ನಲೆ ಸಿಂಗ್, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡು, '1984ರಲ್ಲಿ ಅಸಹಾಯಕ ಮತ್ತು ಮುಗ್ಧ ಸಿಖ್ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ದುರ್ಷ್ಕಮಿಗಳು ಹತ್ಯೆಗೈದರು. ಕಾಂಗ್ರೆಸ್ ನಾಯಕರು ಹಾಗೂ ಅವರ ಆಪ್ತರ ನೇತೃತ್ವದಲ್ಲಿ ನಡೆದ ಈ ಸಿಖ್ ವಿರೋಧಿ ದಂಗೆಗಳನ್ನು ನೆನಪಿಸಿಕೊಂಡರೆ, ಈಗಲೂ ನನಗೆ ನಡುಕ ಶುರುವಾಗುತ್ತದೆ' ಎಂದು ಆರೋಪಿಸಿದ್ದಾರೆ.
1984ರಲ್ಲಿ ನಡೆದ ಘಟನೆ ಜನರನ್ನು ಇನ್ನೂ ಕಾಡುತ್ತಿದೆ. ಭಾರತದಾದ್ಯಂತ ಸುಮಾರು 16,000 ಸಿಖ್ಖರು ಕೊಲ್ಲಲ್ಪಟ್ಟರು ಎಂದು ಸ್ವತಂತ್ರ ವರದಿಗಳು ಹೇಳುತ್ತವೆ ಎಂದು ಬಿಜೆಪಿ ಎಕ್ಸ್‌ನಲ್ಲಿ ಉಲ್ಲೇಖಿಸಿದೆ.
ಇಂದಿರಾ ಗಾಂಧಿಯವರ ಭೀಕರ ಹತ್ಯೆಗೆ 'ಸೇಡು' ತೀರಿಸಿಕೊಳ್ಳಲು ಸಿಖ್ ವಿರೋಧಿ ದಂಗೆಗಳು ನಡೆದವು ಎಂದು ಸಿಂಗ್ ಹೇಳಿದ್ದಾರೆ.
'ಸಿಖ್ ವಿರೋಧಿ ದಂಗೆಗಳು ನನ್ನ ಮನೆಯ ಬಳಿಯೂ ನಡೆದಿತ್ತು, ಆ ವೇಳೆ ಹೌಜ್ ಖಾಸ್‌ನಲ್ಲಿ ವಾಸಿಸುತ್ತಿದ್ದ ನನ್ನ ಹೆತ್ತವರ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ನನಗೆ ಚಿಂತೆಯಾಗಿತ್ತು. ಆ ವೇಳೆ ನಾನು ಮನೆಯಲ್ಲಿ ಇರಲಿಲ್ಲ. ದೆಹಲಿ ಮತ್ತು ಇತರ ಹಲವಾರು ನಗರಗಳಲ್ಲಿ ಊಹಿಸಲಾಗದ ಹಿಂಸಾಚಾರ ಭುಗಿಲೆದ್ದಿದ್ದರೂ ಸಹ, ನನ್ನ ಹಿಂದೂ ಸ್ನೇಹಿತ ನನ್ನ ಪೋಷಕರನ್ನು ಸುರಕ್ಷಿತವಾಗಿ ರಕ್ಷಿಸಿ ನನ್ನ ಅಜ್ಜಿಯ ಮನೆಗೆ ಕರೆದೊಯ್ದಿದ್ದ ಎಂದು ಸಿಂಗ್ ಹೇಳಿದ್ದಾರೆ.
ಸಿಖ್ ವಿರೋಧಿ ದಂಗೆಯಲ್ಲಿ ಸಿಖ್‌ರನ್ನು ಪತ್ತೆ ಹಚ್ಚಲು ಮತದಾರರ ಪಟ್ಟಿಯನ್ನು ಬಳಸಿಕೊಂಡರು. ಈ ಭೀಕರ ದಂಗೆಯ ಸಮಯದಲ್ಲಿ ಪೊಲೀಸರು ಮೂಕ ಪ್ರೇಕ್ಷಕರಂತೆ ಇದ್ದರು ಎಂದೂ ಸಿಂಗ್ ಆರೋಪಿಸಿದ್ದಾರೆ.
ಆದರೆ ಕಾಂಗ್ರೆಸ್ ದಶಕಗಳ ಕಾಲ ಸಿಖ್ ವಿರೋಧಿ ಹಿಂಸಾಚಾರವನ್ನು ನಾಚಿಕೆಯಿಲ್ಲದೆ ನಿರಾಕರಿಸಿತು ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಅಲ್ಪಸಂಖ್ಯಾತರನ್ನು ಸುರಕ್ಷಿತರಾಗಿದ್ದಾರೆ. ಅಲ್ಲದೇ ಯಾವುದೇ ತಾರತಮ್ಯವಿಲ್ಲದೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಪರಿಕ್ಪಲನೆಯನ್ನು ಸಕಾರಾಗೊಳಿಸುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.