ADVERTISEMENT

ಸಿಕ್ಕಿಂ ಭಾರತದ ಅವಿಭಾಜ್ಯ ಅಂಗ ಎಂದು ಕೇಜ್ರಿವಾಲ್ ಸ್ಪಷ್ಟನೆ ನೀಡಿದ್ದೇಕೆ‌?

​ಪ್ರಜಾವಾಣಿ ವಾರ್ತೆ
Published 24 ಮೇ 2020, 11:22 IST
Last Updated 24 ಮೇ 2020, 11:22 IST
ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌
ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌    
""

ನವದೆಹಲಿ: ಸಿಕ್ಕಿಂ ಭಾರತದ ಭಾಗವಲ್ಲ ಎಂಬ ಅರ್ಥ ಬರುವಂತೆ ಜಾಹೀರಾತು ನೀಡಿದ ದೆಹಲಿ ಸರ್ಕಾರ ಮುಜುಗರಕ್ಕೀಡಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ದೆಹಲಿ ಸರ್ಕಾರ, ಜಾಹೀರಾತನ್ನು ಹಿಂಪಡೆದಿದೆ. ಅಲ್ಲದೆ, ತಪ್ಪಿಗೆ ಕಾರಣರಾದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ನಾಗರಿಕರ ಸೇವೆಗಾಗಿ ದುಡಿಯಲು ದೆಹಲಿ ಸರ್ಕಾರ ಭಾನುವಾರ ಸ್ವಯಂಸೇವಕರನ್ನು ಆಹ್ವಾನಿಸಿ ಪತ್ರಿಕೆಗಳಿಗೆ ಜಾಹೀರಾತು ನೀಡಿತ್ತು. ಸ್ವಯಂ ಸೇವಕರಿಗೆ ಇರಬೇಕಾದ ಅರ್ಹತೆಯ ಪಟ್ಟಿಯಲ್ಲಿಸಿಕ್ಕಿಂ ಅನ್ನು ನೇಪಾಳ ಮತ್ತು ಭೂತಾನ್‌ನಂತೆ ಪ್ರತ್ಯೇಕ ದೇಶ ಎಂಬ ಅರ್ಥ ಬರುವಂತೆ ವಿವರಣೆ ನೀಡಿತ್ತು.

ದೆಹಲಿ ಸರ್ಕಾರ ನೀಡಿದ್ದ ಜಾಹೀರಾತು

ದೆಹಲಿ ಸರ್ಕಾರದ ಜಾಹೀರಾತು ಗಮನಿಸಿದ ಸಿಕ್ಕಿಂ ಮುಖ್ಯಮಂತ್ರಿ ಖಂಡನೆ ವ್ಯಕ್ತಪಡಿಸಿದ್ದರು. ಅಲ್ಲದೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಪತ್ರ ಬರೆದಿದ್ದ ಸಿಕ್ಕಿಂನ ಮುಖ್ಯ ಕಾರ್ಯದರ್ಶಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವೇಳೆ#KejriwalExposed ಎಂಬ ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಯಿತು. ಈ ಹ್ಯಾಷ್‌ಟ್ಯಾಗ್‌ನ ಅಡಿಯಲ್ಲಿ ಸಾವಿರಾರು ಮಂದಿ ಕೇಜ್ರಿವಾಲ್‌ ವಿರುದ್ಧ ಟೀಕಾ ಪ್ರಹಾರ ಮಾಡಿದ್ದರು.

ADVERTISEMENT

ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅರವಿಂದ ಕೇಜ್ರಿವಾಲ್‌, 'ಸಿಕ್ಕಿಂ ಭಾರತದ ಅವಿಭಾಜ್ಯ ಅಂಗ,' ಎಂದಿದ್ದಾರೆ. ಅಲ್ಲದೆ, ಅಪಾರ್ಥ ಕಲ್ಪಿಸಿದ ಜಾಹೀರಾತನ್ನು ಹಿಂಪಡೆದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

'ಸಿಕ್ಕಿಂ ಭಾರತದ ಅವಿಭಾಜ್ಯ ಅಂಗ. ಇಂಥ ತಪ್ಪುಗಳನ್ನು ಸಹಿಸಲು ಸಾಧ್ಯವಿಲ್ಲ. ಜಾಹೀರಾತನ್ನು ಸರ್ಕಾರ ಹಿಂಪಡೆಯುತ್ತಿದೆ. ಅಲ್ಲದೆ, ತಪ್ಪು ಮಾಡಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ,' ಎಂದು ಟ್ವೀಟ್‌ ಮಾಡಿದ್ದಾರೆ.

ಇದಕ್ಕೂ ಹಿಂದೆ ಟ್ವೀಟ್‌ ಮಾಡಿದ್ದ ದೆಹಲಿ ಲೆಫ್ಟಿನೆಂಟ್‌ ಜನರಲ್‌, ಜಾಹೀರಾತಿನಲ್ಲಿ ಸಿಕ್ಕಿಂ ಬೇರೆಯದ್ದೇ ದೇಶ ಎಂಬಂತೆ ತಪ್ಪಾದ ವಿವರಣೆ ನೀಡಿ,ಭಾರತದ ಪ್ರಾದೇಶಿಕ ಅಖಂಡತೆಗೆ ಅಪಮಾನ ಉಂಟಾಗುವಂತೆ ಮಾಡಿದನಾಗರಿಕ ಭದ್ರತಾ ನಿರ್ದೇಶನಾಲಯದ ಹಿರಿಯ ಅಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಟ್ವೀಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.