ADVERTISEMENT

ಎಸ್‌ಪಿಬಿಗೆ ಕೋವಿಡ್ ನೆಗೆಟಿವ್; ವೆಂಟಿಲೇಟರ್ ಸಹಕಾರ ಮುಂದುವರಿಕೆ: ಎಸ್‌.ಪಿ.ಚರಣ್

ಏಜೆನ್ಸೀಸ್
Published 7 ಸೆಪ್ಟೆಂಬರ್ 2020, 14:43 IST
Last Updated 7 ಸೆಪ್ಟೆಂಬರ್ 2020, 14:43 IST
 ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ
ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ    

ಚೆನ್ನೈ: ಕೋವಿಡ್‌–19 ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ (74) ಅವರಿಗೆ ಸೋಮವಾರ ಕೋವಿಡ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿರುವುದಾಗಿ ಅವರ ಪುತ್ರ ಎಸ್.ಪಿ. ಚರಣ್ ಹೇಳಿದ್ದಾರೆ.

ಚೆನ್ನೈನ ಎಂಜಿಎಂ ಹೆಲ್ತ್‌ಕೇರ್‌ ಹಾಸ್ಪಿಟಲ್‌ನಲ್ಲಿ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ವೆಂಟಿಲೇಟರ್‌ ಸಹಕಾರದೊಂದಿಗೆ ಚಿಕಿತ್ಸೆ ಮುಂದುವರಿದಿದೆ.

ಇನ್‌ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ ಚರಣ್, 'ಅಪ್ಪನ ಶ್ವಾಸಕೋಶದಲ್ಲಿ ಚೇತರಿಕೆ ಕಂಡು ಬರುತ್ತದೆಂದು ನಿರೀಕ್ಷಿಸುತ್ತಿದ್ದೇವೆ. ಆದರೆ, ಸದ್ಯಕ್ಕೆ ಅವರು ವೆಂಟಿಲೇಟರ್‌ನಿಂದ ಹೊರ ಬರುವುದು ಸಾಧ್ಯವಾಗಿಲ್ಲ. ಸಂತಸದ ವಿಷಯವೆಂದರೆ, ಅವರು ಕೋವಿಡ್‌ ನೆಗೆಟಿವ್ ಆಗಿದ್ದಾರೆ' ಎಂದಿದ್ದಾರೆ.

ADVERTISEMENT

ಕೋವಿಡ್‌ ದೃಢಪಟ್ಟ ಬೆನ್ನಲ್ಲೇ ಆಗಸ್ಟ್ 5ರಂದು ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆರಂಭದಲ್ಲಿ ಸೋಂಕಿನ ಕೆಲವು ಲಕ್ಷಣಗಳಷ್ಟೇ ಕಂಡು ಬಂದಿತ್ತು. ಅನಂತರ ಅವರನ್ನು ಐಸಿಯುಗೆ ವರ್ಗಾಯಿಸಲಾಯಿತು.

'ಇವೆಲ್ಲದರ ಹೊರತಾಗಿ, ಅಪ್ಪ–ಅಮ್ಮನ ಮದುವೆ ವಾರ್ಷಿಕೋತ್ಸವದ ಸಣ್ಣ ಸಂಭ್ರಮ ಆಚರಿಸಿದೆವು. ಅಪ್ಪ ಕ್ರಿಕೆಟ್‌ ಮತ್ತು ಟೆನ್ನಿಸ್‌ ನೋಡುತ್ತಿದ್ದಾರೆ. ಐಪಿಎಲ್‌ಗಾಗಿ ಕಾಯುತ್ತಿದ್ದಾರೆ ಹಾಗೂ ಬರೆಯುತ್ತಿದ್ದಾರೆ ಮತ್ತು ಮಾತನಾಡುತ್ತಿದ್ದಾರೆ' ಎಂದು ವಿಡಿಯೊದಲ್ಲಿ ತಿಳಿಸಿದ್ದಾರೆ.

ಎಸ್‌ಪಿಬಿ 16 ಭಾಷೆಗಳಲ್ಲಿ ಸುಮಾರು 40,000 ಹಾಡುಗಳನ್ನು ಹಾಡಿದ್ದಾರೆ. ಆರು ಬಾರಿ ರಾಷ್ಟ್ರೀಯ ಪ್ರಶಸ್ತಿ ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.