ಔರಂಗಬಾದ್(ಬಿಹಾರ): ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ‘ಮತಗಳ್ಳತನ’ದ ಹೊಸ ಅಸ್ತ್ರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ.
ಈ ಬಗ್ಗೆ ತಮ್ಮ ವಾಟ್ಸಪ್ ಚಾನೆಲ್‌ನಲ್ಲಿ ರಾಹುಲ್ ಬರೆದುಕೊಂಡಿದ್ದಾರೆ. ಬಿಹಾರದಲ್ಲಿ ಎಸ್‌ಐಆರ್ ನಂತರ ಮತದಾರರ ಪಟ್ಟಿಯಿಂದ ಕೈಬಿಟ್ಟವರ ಫೋಟೊವನ್ನು ಪೋಸ್ಟ್ ಜೊತೆಗೆ ಹಂಚಿಕೊಂಡಿದ್ದಾರೆ.
‘ಎಸ್‌ಐಆರ್ ಮತ ಕಳ್ಳತನದ ಹೊಸ ಅಸ್ತ್ರ. ಕಾಕತಾಳೀಯವೆಂಬಂತೆ ಈ ಚಿತ್ರದಲ್ಲಿ ನನ್ನೊಂದಿಗೆ ನಿಂತಿರುವ ಈ ಜನರು ಈ ಕಳ್ಳತನದ 'ಜೀವಂತ' ಪುರಾವೆಯಾಗಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
‘ಅವರೆಲ್ಲರೂ 2024 ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಆದರೆ, ಬಿಹಾರ ವಿಧಾನಸಭಾ ಚುನಾವಣೆಗಳು ಬರುವ ಹೊತ್ತಿಗೆ ಅವರ ಗುರುತು, ಅಸ್ತಿತ್ವವು ಭಾರತದ ಪ್ರಜಾಪ್ರಭುತ್ವದಿಂದ ಅಳಿಸಿಹೋಗಿದೆ’ ಎಂದಿದ್ದಾರೆ.
‘ಈ ಫೋಟೊದಲ್ಲಿ ಇರುವವರು ಯಾರು ಗೊತ್ತಾ?.. ರೈತ ಮತ್ತು ನಿವೃತ್ತ ಸೈನಿಕ ರಾಜ್ ಮೋಹನ್ ಸಿಂಗ್(70), ದಲಿತ ಸಮುದಾಯದ ಮಹಿಳೆ ಉಮ್ರಾವತಿ ದೇವಿ (35), ಹಿಂದುಳಿದ ವರ್ಗಕ್ಕೆ ಸೇರಿದ ಧನಂಜಯ್ ಕುಮಾರ್ ಬಿಂದ್(30), ಈ ಹಿಂದೆ ನರೇಗಾದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಸೀತಾ ದೇವಿ (45), ಹಿಂದುಳಿದ ವರ್ಗದ ರಾಜು ದೇವಿ(55), ಅಲ್ಪಸಂಖ್ಯಾತ ಸಮುದಾಯದ ಮೊಹಮ್ಮುದ್ದೀನ್ ಅನ್ಸಾರಿ (52)’ ಎಂದು ತಿಳಿಸಿದ್ದಾರೆ.
‘ಬಹುಜನರೆಂಬ ಕಾರಣಕ್ಕೆ ಬಿಜೆಪಿ ಮತ್ತು ಚುನಾವಣಾ ಆಯೋಗ ಸೇರಿಕೊಂಡು ಅವರನ್ನು ಜೀವನದುದ್ದಕ್ಕೂ ಬಡವರಾಗಿಯೇ ಇರುವಂತೆ ಶಿಕ್ಷೆ ವಿಧಿಸುತ್ತಿದೆ. ನಮ್ಮ ಸೈನಿಕರನ್ನೂ ಸಹ ಬಿಡಲಿಲ್ಲ’ ಎಂದು ಕಿಡಿಕಾರಿದ್ದಾರೆ.
‘ಅವರಿಗೆ ಮತದಾನ ಮಾಡುವ ಹಕ್ಕಾಗಲಿ, ಗುರುತಾಗಲಿ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಸಾಮಾಜಿಕ ತಾರತಮ್ಯ ಮತ್ತು ಆರ್ಥಿಕ ಪರಿಸ್ಥಿತಿಗಳಿಂದಾಗಿ ವ್ಯವಸ್ಥೆಯ ಪಿತೂರಿಯ ವಿರುದ್ಧ ಅವರಿಗೆ ಹೋರಾಡಲು ಸಾಧ್ಯವಾಗುತ್ತಿಲ್ಲ. ಅವರ ಮೂಲಭೂತ ಹಕ್ಕನ್ನು ರಕ್ಷಿಸಲು ನಾವು ಅವರೊಂದಿಗೆ ಇಲ್ಲಿದ್ದೇವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.