
ಚುನಾವಣಾ ಆಯೋಗವು ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭಿಸಿದ್ದನ್ನು ವಿರೋಧಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಕೋಲ್ಕತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು
–ಪಿಟಿಐ ಚಿತ್ರ
ನವದೆಹಲಿ/ಕೋಲ್ಕತ್ತ: ಮೂರು ಕೇಂದ್ರಾಡಳಿತ ಪ್ರದೇಶ ಮತ್ತು 9 ರಾಜ್ಯಗಳಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ಚುನಾವಣಾ ಆಯೋಗವು ಮಂಗಳವಾರ ಆರಂಭಿಸಿದೆ.
ಮತಗಟ್ಟೆ ಹಂತದ ಅಧಿಕಾರಿಗಳು ಮನೆ ಮನೆಗೆ ತೆರಳಿ ಸ್ವಯಂ ಮಾಹಿತಿಗಳನ್ನು ತುಂಬುವ ನಮೂನೆಗಳನ್ನು ವಿತರಿಸಿದರು.
ಪಶ್ವಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಎಸ್‌ಐಆರ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ‘ಎಸ್‌ಐಆರ್ ಅಂದರೆ ಮತ್ತೇನೂ ಅಲ್ಲ, ಅದು ‘ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)’ ಇದ್ದಂತೆ’ ಎಂದಿರುವ ತಮಿಳುನಾಡು ಸರ್ಕಾರ, ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಎಸ್‌ಐಆರ್ ಕುರಿತು ನಿರ್ಧಾರ ಕೈಗೊಳ್ಳಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ಆನ್‌ಲೈನ್ ಮೂಲಕ ಸರ್ವ ಪಕ್ಷ ಸಭೆ ಕರೆದಿದ್ದಾರೆ.
2002ರಲ್ಲಿ ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯು ಎರಡು ವರ್ಷದವರೆಗೆ ನಡೆದಿತ್ತು. ಈ ಬಾರಿ ಒಂದೇ ತಿಂಗಳಿಗೆ ಇದನ್ನು ಮುಗಿಸಿಬಿಡುವ ಆತುರ ಆಯೋಗಕ್ಕೆ ಏಕೆ?ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ
‘ಎಸ್‌ಐಆರ್ ಭಯ: ವಾರದಲ್ಲಿ ಏಳು ಸಾವು’
‘ಎಸ್‌ಐಆರ್ ಭಯದಿಂದ ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಎಸ್‌ಐಆರ್ ಕುರಿತ ಭಯ ಮತ್ತು ದಿಗಿಲು ಜನರ ಪ್ರಾಣ ತೆಗೆಯುತ್ತಿದೆ. ಕೇಂದ್ರ ಸರ್ಕಾರವು ಜವಾಬ್ದಾರಿಯಿಂದ ನಡೆದುಕೊಳ್ಳಲಿಲ್ಲ ಎಂದಾದರೆ ನಮ್ಮ ಪಕ್ಷವು ಈ ಯುದ್ಧವನ್ನು ದೆಹಲಿ ಅಂಗಳಕ್ಕೆ ಕೊಂಡೊಯ್ಯುತ್ತದೆ’ ಎಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಎಚ್ಚರಿಕೆ ನೀಡಿದರು. ಎಸ್‌ಐಆರ್ ಪ್ರಕ್ರಿಯೆ ಆರಂಭಿಸಿರುವುದನ್ನು ವಿರೋಧಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕೋಲ್ಕತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮಮತಾ ‘ಎಸ್‌ಐಆರ್ ಕಾರಣದಿಂದ ರಾಜ್ಯದಲ್ಲಿ ಒಬ್ಬ ಮತದಾರ ಕೂಡ ಮತದಾರರ ಪಟ್ಟಿಯಿಂದ ಹೊರಗುಳಿದರೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಉರುಳುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದರು. ‘ಮುಂದಿನ ವರ್ಷ ಚುನಾವಣೆ ನಡೆಯಲಿರುವ ವಿರೋಧ ಪಕ್ಷಗಳ ಆಡಳಿತವಿರುವ ತಮಿಳುನಾಡು ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಮಾತ್ರವೇ ಎಸ್‌ಐಆರ್ ನಡೆಸಲಾಗುತ್ತಿದೆ. ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ ಯಾಕಿಲ್ಲ. ಅಸ್ಸಾಂ ಸೇರಿ ಈಶಾನ್ಯ ರಾಜ್ಯಗಳಲ್ಲಿ ಎಸ್ಐಆರ್ ಅನ್ನು ಯಾಕೆ ನಡೆಸುತ್ತಿಲ್ಲ ಎನ್ನುವ ಪ್ರಶ್ನೆಗೆ ಚುನಾವಣಾ ಆಯೋಗವು ಉತ್ತರ ನೀಡಲೇಬೇಕು’ ಎಂದರು. ‘ಎಸ್‌ಐಆರ್ ಎಂದರೆ ‘ಸೈಲೆಂಟ್ ಇನ್‌ವಿಜಿಬಲ್ ರಿಗ್ಗಿಂಗ್’ (ಯಾರಿಗೂ ತಿಳಿಯದಂತೆ ಕದ್ದುಮುಚ್ಚಿ ಮತಗಳ್ಳತನ ಮಾಡುವುದು). ಈ ಪ್ರಕ್ರಿಯೆಯು ಆತುರ ಮತ್ತು ರಾಜಕೀಯ ದುರುದ್ದೇಶ ಪ್ರೇರಿತವಾದುದು’ ಎಂದು ಅಭಿಪ್ರಾಯಪಟ್ಟರು.
‘ಹೆಸರಿನ ಕಾಗುಣಿತದಲ್ಲಿ ತಪ್ಪು: ವ್ಯಕ್ತಿ ಆತ್ಮಹತ್ಯೆ’
‘ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭಗೊಂಡ ಕಾರಣ ದಾಖಲೆಗಳಲ್ಲಿ ಇರುವ ತನ್ನ ಹೆಸರಿನ ಕಾಗುಣಿತದಲ್ಲಿ ತಪ್ಪುಗಳಿವೆ ಎಂದು ಹೆದರಿ ಹೌರಾ ಜಿಲ್ಲೆಯ ಜಾಹಿರ್ ಮಲ್ (30) ಎಂಬುವರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ’ ಎಂದು ಪೊಲೀಸರು ತಿಳಿಸಿದರು. ‘ಕಾಗುಣಿತ ತಪ್ಪು ಇರುವ ಕಾರಣ ತನ್ನ ಪೌರತ್ವದ ಬಗ್ಗೆ ಅನುಮಾನ ಮೂಡಬಹುದು ಅಥವಾ ತನ್ನ ಮತದಾನದ ಹಕ್ಕು ಕಳೆದುಕೊಳ್ಳಬಹುದು ಎಂದು ಭಯಭೀತಗೊಂಡಿದ್ದ. ಕಳೆದ ಕೆಲವು ವಾರಗಳಲ್ಲಿ ಈ ತಪ್ಪು ಸರಿಪಡಿಸಲು ಸರ್ಕಾರಿ ಕಚೇರಿ ಅಲೆದಾಡಿದ್ದ. ಆದರೆ ಅದು ಸಾಧ್ಯವಾಗಲಿಲ್ಲ’ ಎಂದು ಆತನ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.