ಪ್ರಿಯಾಂಕಾ ಗಾಂಧಿ
ವಯನಾಡು: ಕೇರಳ ಸೇರಿದಂತೆ ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕೈಗೊಳ್ಳಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದ್ದು, ಈ ನಡುವೆ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ನಡೆಸಿದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹೇಗೆ ಎಂಬುವುದನ್ನು ನಾವು ನೋಡಿದ್ದೇವೆ. ಈ ಬಗ್ಗೆ ಸಂಸತ್ತಿನ ಒಳಗೂ ಮತ್ತು ಹೊರಗೂ ವಿರೋಧ ವ್ಯಕ್ತಪಡಿಸಿದ್ದೇವೆ. ಕೇರಳದಲ್ಲಿ ಎಸ್‌ಐಆರ್ ನಡೆಸಲು ಚುನಾವಣಾ ಆಯೋಗ ಯೋಜಿಸಿದೆ. ಆದರೆ ಈ ಪ್ರಕ್ರಿಯೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ತಿಳಿಸಿದ್ದಾರೆ.
ಈ ಎಸ್‌ಐಆರ್ ಕ್ರಮವು ಚುನಾವಣೆಯಲ್ಲಿ ವಂಚನೆ ನಡೆಸಲು ಇರುವ ಏಕೈಕ ಮಾರ್ಗ. ಬಿಹಾರದಲ್ಲಿ ನಡೆಸಲಾದ ಎಸ್‌ಐಆರ್ ಪ್ರಕ್ರಿಯೆ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನದ ಭಾಗವಾಗಿತ್ತು ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.
ಬಿಹಾರದಲ್ಲಿ ಎಸ್‌ಐಆರ್ ಅನ್ನು ಹೇಗೆ ಜಾರಿ ಮಾಡಿದರು ಎಂಬುದನ್ನು ನಾವು ನೋಡಿದ್ದೇವೆ. ಅವರು ಪ್ರತಿ ರಾಜ್ಯದಲ್ಲೂ ಹಾಗೆ ಮಾಡಲಿದ್ದರೆ, ಅದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ. ನಾವೆಲ್ಲರೂ ಈ ವಿರುದ್ಧ ಹೋರಾಡಬೇಕಾಗಿದೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.
ವಯನಾಡಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಿಯಾಂಕಾ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕೈಗೊಳ್ಳಲು ಕೇಂದ್ರ ಚುನಾವಣಾ ಆಯೋಗ ಮುಂದಡಿಯಿಟ್ಟಿದ್ದು ಎರಡನೇ ಹಂತದಲ್ಲಿ 10 ರಾಜ್ಯ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಾಗುವುದು ಎಂದು ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದರು.
ಎರಡನೇ ಹಂತದಲ್ಲಿ ಎಸ್‌ಐಆರ್ ನಡೆಯಲಿರುವ ತಮಿಳುನಾಡು, ಪುದುಚೇರಿ, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ 2026ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಸ್ಸಾಂನಲ್ಲೂ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಅಲ್ಲಿನ ಎಸ್‌ಐಆರ್ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಪ್ರತ್ಯೇಕವಾಗಿ ಘೋಷಿಸಲಾಗುವುದು ಎಂದು ಜ್ಞಾನೇಶ್ ಕುಮಾರ್ ಸ್ಪಷ್ಟಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.