ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೂ ಮುನ್ನ ನಡೆದ ಪಕ್ಷದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಧ್ವಜ ವಂದನೆ ಸಲ್ಲಿಸಿದರು
–ಪಿಟಿಐ ಚಿತ್ರ
ಪಟ್ನಾ : ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್‌ಐಆರ್) ಒಂದು ಪಿತೂರಿಯಾಗಿದ್ದು, ನಮ್ಮ ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆಯಾಗಿದೆ. ಈ ಪ್ರಕ್ರಿಯೆಯು ಅಧಿಕಾರಕ್ಕೆ ಅಂಟಿಕೊಳ್ಳುವ ಬಿಜೆಪಿಯ ‘ಟೂಲ್‌ಕಿಟ್’ನ ಮತ್ತೊಂದು ಕೊಳಕು ತಂತ್ರವಾಗಿದೆ’ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಅಂಗೀಕರಿಸಿದ ನಿರ್ಣಯಗಳಲ್ಲಿ ಈ ಪ್ರತಿಪಾದನೆ ಮಾಡಿದೆ.
ಬಡವರು, ಕಾರ್ಮಿಕರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಗುರಿಯನ್ನು ಎಸ್‌ಐಆರ್ ಮೂಲಕ ಸಾಧಿಸಲು ಬಿಜೆಪಿ ಹೊರಟಿದೆ. ಹೀಗಾಗಿ ಬಿಹಾರದಿಂದ ಎನ್‌ಡಿಎ ಅನ್ನು ಹೊರಹಾಕಲು ಜನರು ದೃಢ ನಿಶ್ಚಯ ಮಾಡಬೇಕಿದೆ. ಚುನಾವಣೆಯಲ್ಲಿ ಜನರು ತಮ್ಮ ಮತದಾನದ ಶಕ್ತಿಯನ್ನು ಪ್ರದರ್ಶಿಸಬೇಕಿದೆ ಎಂದು ತಿಳಿಸಿದೆ.
‘ಈ ವಿಷಯ ಕುರಿತು ಕಾಂಗ್ರೆಸ್, ಸಂಸತ್ತಿನ ಒಳಗೆ ಮತ್ತು ಹೊರಗೆ ಹೋರಾಟವನ್ನು ಮುಂದುವರಿಸುತ್ತದೆ. ಈ ಮೂಲಕ ನಮ್ಮ ಮೂಲಭೂತ ಸಾಂವಿಧಾನಿಕ ಹಕ್ಕುಗಳ ರಕ್ಷಣೆ, ಮಿಸಲಾತಿ, ಸಾಮಾಜಿಕ ನ್ಯಾಯ ಮತ್ತು ಪ್ರತಿ ನಾಗರಿಕರಿಗೂ ಸವಲತ್ತುಗಳನ್ನು ತಲುಪಿಸುವುದನ್ನು ಖಚಿತಪಡಿಸಿಕೊಳ್ಳುತ್ತದೆ’ ಎಂದು ಅದು ನಿರ್ಣಯದಲ್ಲಿ ಉಲ್ಲೇಖಿಸಿದೆ.
ಮತಕಳವಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸಿಡಬ್ಲ್ಯುಸಿ, ‘ಇದು ಬಹುಮತ ಪಡೆಯಲು ಬಿಜೆಪಿ ನಡೆಸಿದ ವ್ಯವಸ್ಥಿತ ಮತ್ತು ಉದ್ದೇಶಪೂರ್ವಕ ಪಿತೂರಿಯಾಗಿದೆ. ಕದ್ದ ಮತಗಳಿಂದ ರಚನೆಯಾದ ಸರ್ಕಾರ ಯಾವುದೇ ನೈತಿಕತೆ ಹೊಂದಿರುವುದಿಲ್ಲ’ ಎಂದು ದೂರಿದೆ.
‘ಈ ಬಹುಮತವು ಸಾರ್ವಜನಿಕರ ನಂಬಿಕೆಯನ್ನು ಆಧರಿಸಿರಬೇಕು. ಆದರೆ ಇಲ್ಲಿ ವಂಚನೆಯನ್ನು ಆಧರಿಸಿದೆ. ಹೀಗಾಗಿ ಆಡಳಿತ ನಡೆಸುವವರಲ್ಲಿ ಪ್ರಜಾಪ್ರಭುತ್ವದ ಹೊಣೆಗಾರಿಕೆಯ ಕೊರತೆಯಿದೆ’ ಎಂದು ಕಳವಳ ವ್ಯಕ್ತಪಡಿಸಿದೆ.
‘ಸರ್ಕಾರವು ಸೇವೆಯ ಮೂಲಕವಲ್ಲ, ವಂಚನೆ ಮತ್ತು ಬೆದರಿಸುವ ಮೂಲಕ ಉಳಿಯಬಹುದು ಎಂಬುದಾಗಿ ಬಿಜೆಪಿ ತಿಳಿದುಕೊಂಡಿದೆ. ಹೀಗಾಗಿ ಸರ್ಕಾರ ನಿರಾಸಕ್ತಿಯಿಂದ ಕೂಡಿದೆ’ ಎಂದು ನಿರ್ಣಯದಲ್ಲಿ ಪ್ರಸ್ತಾಪಿಸಿದೆ.
‘ಮತಕಳವನ್ನು ಸಂವಿಧಾನ, ಆರ್ಥಿಕ, ಸಾಮಾಜಿಕ ನ್ಯಾಯ ಮತ್ತು ರಾಷ್ಟ್ರೀಯ ಭದ್ರತೆಯ ಮೇಲಿನ ದಾಳಿಗಳಿಂದ ಬೇರ್ಪಡಿಸಲು ಆಗದು’ ಎಂದೂ ಅದು ಹೇಳಿದೆ.
ಬಿಹಾರದ ಚಂಪಾರಣ್‌ನಲ್ಲಿ ‘ಇಂಡಿಗೊ (ನೀಲಿ) ಪ್ಲಾಂಟರು’ಗಳ ವಿರುದ್ಧ ಮಹಾತ್ಮ ಗಾಂಧಿ ಅವರು ಸತ್ಯಾಗ್ರಹ ಆರಂಭಿಸಿದ್ದರು. ಅವರು ಭಾರತದಲ್ಲಿ ನಡೆಸಿದ ಮೊದಲ ಸತ್ಯಾಗ್ರಹ ಅದಾಗಿತ್ತು. ಅದು ರಾಷ್ಟ್ರದ ದಿಕ್ಕನ್ನೇ ಬದಲಿಸಿತ್ತು. ಅಂತೆಯೇ ಮತ್ತೊಮ್ಮೆ ಬಿಹಾರವು ನಿರ್ಣಾಯಕ ಘಟ್ಟದಲ್ಲಿದೆ. ರಾಜ್ಯದ ಜನರು ಪ್ರಜಾಸತ್ತಾತ್ಮಕ ಹೋರಾಟವನ್ನು ಬಲಪಡಿಸಬೇಕು ಎಂದು ನಿರ್ಣಯದಲ್ಲಿ ಮನವಿ ಮಾಡಲಾಗಿದೆ.
ಬಿಹಾರದಲ್ಲಿ ದಲಿತರು, ಹಿಂದುಳಿದ ವರ್ಗಗಳು, ಬುಡಕಟ್ಟು ಜನರು, ಅಲ್ಪಸಂಖ್ಯಾತರು, ತಳ ಸಮುದಾಯಗಳ ಜನರ ಮತದಾನದ ಹಕ್ಕನ್ನು ವ್ಯವಸ್ಥಿತವಾಗಿ ದೋಚಲು ಹುನ್ನಾರ ನಡೆದಿದೆ ಎಂದು ಅದು ದೂರಿದೆ.
ಮತಕಳವು ಮತದಾನದ ಹಕ್ಕನ್ನು ನಿರಾಕರಿಸುವುದರ ಜತೆಗೆ, ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಸವಲತ್ತುಗಳಿಂದ ವಂಚಿತರನ್ನಾಗಿ ಮಾಡುತ್ತದೆ. ಅಲ್ಲದೆ ಸಾಂವಿಧಾನಿಕವಾಗಿ ನೀಡಲಾಗಿರುವ ಮೀಸಲಾತಿಗೂ ಕುತ್ತು ತರುತ್ತದೆ. ಈ ಮೂಲಕ ಜನರ ಭವಿಷ್ಯ, ಘನತೆ ಮತ್ತು ಅವರ ಸಾಂವಿಧಾನಿಕ ಹಕ್ಕು, ಅರ್ಹತೆಗಳನ್ನೂ ಕದಿಯುತ್ತದೆ ಎಂದು ಹೇಳಿದೆ.
ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಖಜಾಂಚಿ ಅಜಯ್ ಮಾಕನ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ಜೈರಾಮ್ ರಮೇಶ್, ಸಚಿನ್ ಪೈಲಟ್ ಮತ್ತು ಬಿಹಾರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜೇಶ್ ಕುಮಾರ್ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್‌ಗೆ ಇಂದೇಕೆ ಪಟ್ನಾ ನೆನಪಾಯಿತು? 85 ವರ್ಷಗಳ ನಂತರ ಅದು ಇಲ್ಲಿ ಸಿಡಬ್ಲ್ಯುಸಿ ಸಭೆ ನಡೆಸಿದ್ದರ ಹಿಂದೆ ರಾಜಕೀಯ ಲಾಭ ಪಡೆಯುವುದಲ್ಲದೆ ಮತ್ತೇನು ಉದ್ದೇಶವಿದೆ?– ರವಿಶಂಕರ್ ಪ್ರಸಾದ್ ಬಿಜೆಪಿ ನಾಯಕ
ಪಟ್ನಾ: ಬಿಹಾರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ದೌರ್ಜನ್ಯ ತಡೆ ಕಾಯ್ದೆಯಂತೆಯೇ ಅತಿ ಹಿಂದುಳಿದ ವರ್ಗಗಳ (ಇಬಿಸಿ) ಜನರ ಮೇಲಿನ ದೌರ್ಜನ್ಯ ತಡೆಗೆ ಕಾನೂನು ರೂಪಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಭರವಸೆ ನೀಡಿದರು.
ಅತ್ಯಂತ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಸಮಾವೇಶದಲ್ಲಿ ಮಾತನಾಡಿದ ಅವರು ಇಬಿಸಿಗಳ ಏಳಿಗೆಗಾಗಿ 10 ಸಂಕಲ್ಪಗಳನ್ನು ಕೈಗೊಂಡಿರುವುದಾಗಿ ಹೇಳಿದರು.
ನಿತೀಶ್ ಕುಮಾರ್ ಸರ್ಕಾರ ನಡೆಸಿದ ಜಾತಿ ಸಮೀಕ್ಷೆಯ ಪ್ರಕಾರ ರಾಜ್ಯದ ಜನಸಂಖ್ಯೆಯಲ್ಲಿ ಶೇ 36ರಷ್ಟು ಇಬಿಸಿಗಳು ಇದ್ದಾರೆ. ‘ಇಬಿಸಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ’ ಜಾರಿಗೊಳಿಸಲಾಗುವುದು. ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತಿಗಳಲ್ಲಿ ಇಬಿಸಿಗಳಿಗೆ ಹಾಲಿ ಚಾಲ್ತಿಯಿರುವ ಶೇ 20ರ ಮೀಸಲಾತಿ ಪ್ರಮಾಣವನ್ನು ಶೇ 30ಕ್ಕೆ ಏರಿಸಲಾಗುವುದು ಎಂದು ರಾಹುಲ್ ತಿಳಿಸಿದರು.
ಎಸ್‌ಸಿ ಎಸ್‌ಟಿ ಒಬಿಸಿ ಮತ್ತು ಇಬಿಸಿಗಳಿಗೆ ರಾಜ್ಯದಲ್ಲಿನ ₹ 25 ಕೋಟಿಗೂ ಹೆಚ್ಚು ಮೊತ್ತದ ಗುತ್ತಿಗೆಗಳಲ್ಲಿ ಶೇ 50ರಷ್ಟು ಮೀಸಲಾತಿ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾವಕಾಶ ಭೂ ರಹಿತರಿಗೆ ನಗರ ಪ್ರದೇಶಗಳಲ್ಲಿ ಮೂರು ಡೆಸಿಮಲ್ ಮತ್ತು ಗ್ರಾಮೀಣ ಭಾಗದಲ್ಲಿ ಐದು ಡೆಸಿಮಲ್‌ನಷ್ಟು ಜಮೀನು ನೀಡಲಾಗುವುದು ಎಂದು ಘೋಷಿಸಿದರು. ಶೇ 50ರಷ್ಟು ಮೀಸಲಾತಿ ಮಿತಿಯನ್ನು ರದ್ದುಪಡಿಸುವುದು ಮೀಸಲಾತಿ ನಿಯಂತ್ರಣ ಪ್ರಾಧಿಕಾರ ಸ್ಥಾಪನೆ ಸೇರಿ ಹಲವು ಭರವಸೆಗಳನ್ನು ಅವರು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.