ADVERTISEMENT

ಮಾತುಕತೆಯಿಂದ ಗಡಿ ಗೊಂದಲ ಇತ್ಯರ್ಥ: ಸೇನಾ ಮುಖ್ಯಸ್ಥ ನರವಣೆ ಆಶಯ

ಪಿಟಿಐ
Published 1 ಜುಲೈ 2021, 12:34 IST
Last Updated 1 ಜುಲೈ 2021, 12:34 IST
ಎಂ.ಎಂ.ನರವಣೆ
ಎಂ.ಎಂ.ನರವಣೆ   

ನವದೆಹಲಿ: ‘ಪೂರ್ವ ಲಡಾಖ್‌ನಲ್ಲಿನ ಗಡಿ ವಿವಾದ ಕುರಿತು ಭಾರತ ಮತ್ತು ಚೀನಾ ನಡುವೆ ನಡೆದಿರುವ ಮಾತುಕತೆ ಫಲಪ್ರದವಾಗುತ್ತಿದ್ದು, ಸೇನೆಯ ಹಿಂತೆಗೆತ ಪ್ರಕ್ರಿಯೆ ಆರಂಭದ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ’ ಎಂದು ಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಗುರುವಾರ ಅಭಿಪ್ರಾಯಪಟ್ಟರು. ಬಾಕಿ ಇರುವ ಗೊಂದಲಗಳೂ ಬಗೆಹರಿಯಲಿವೆ ಎಂದೂ ಅವರು ಆಶಿಸಿದರು.

ಚಿಂತಕರ ಜೊತೆಗಿನ ವರ್ಚುಯಲ್‌ ಸಭೆಯಲ್ಲಿ ಮಾತನಾಡಿದ ಅವರು, ಉಭಯ ದೇಶಗಳ ಸೇನಾ ಪ್ರಮುಖರ ವಿವಿಧ ಹಂತಗಳಲ್ಲಿ ಮಾತುಕತೆ ನಡೆದಿದೆ. ಫೆಬ್ರುವರಿಯಲ್ಲಿ ಸೇನೆ ಹಿಂತೆಗೆದುಕೊಂಡ ಬಳಿಕವಾಸ್ತವ ಗಡಿ ರೇಖೆಯುದ್ದಕ್ಕೂ ಪರಿಸ್ಥಿತಿ ಪನಾಂಗ್ ಸರೋವರ ಮತ್ತು ಕೈಲಾಶ್‌ ವಲಯದಲ್ಲಿ ಸಹಜ ಸ್ಥಿತಿಗೆ ಬರುತ್ತಿದೆ ಎಂದು ಅಭಿಪ್ರಾಯಪಟ್ಟರು.

ಸೇನೆಯನ್ನು ವಾಪಸು ಕರೆಸಿಕೊಳ್ಳುವ ಕುರಿತಂತೆ ಉಭಯ ಬಣಗಳು ತಮ್ಮ ಮಾತಿಗೆ ಬದ್ಧವಾಗಿವೆ. ವಿವಿಧ ಹಂತಗಳು, ರಾಜಕೀಯ ಹಾಗೂ ರಾಜತಾಂತ್ರಿಕ ಹಂತ ಸೇರಿದಂತೆ ಚರ್ಚೆ ನಡೆದಿದೆ ಎಂದು ನರವಣೆ ತಿಳಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ ನರವಣೆ ಅವರು, ಗಡಿ ಭಾಗದಲ್ಲಿ ಕಳೆದ ಒಂದು ವರ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಸೇನೆಯು ನಿರಂತರವಾಗಿ ಸಿದ್ಧವಾಗಿರಬೇಕಿದೆ ಎಂದು ಅಭಿಪ್ರಾಯಪಟ್ಟರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ದೇಶವು ನೆರೆ ರಾಷ್ಟ್ರಗಳ ಜೊತೆಗಿನ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಬಯಸಲಿದೆ ಎಂದು ಹೇಳಿಕೆ ನೀಡಿದ ಹಿಂದೆಯೇ, ಸೇನಾ ಮುಖ್ಯಸ್ಥರ ಈ ಹೇಳಿಕೆಯು ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.