ADVERTISEMENT

ನಿರ್ಭಯಾ ಪ್ರಕರಣದ ಆ ಆರು ಮಂದಿ ಇವರು...

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 20:30 IST
Last Updated 20 ಮಾರ್ಚ್ 2020, 20:30 IST
ನೇಣುಗಂಬಕ್ಕೆ ಏರಿದ ಅಪರಾಧಿಗಳು
ನೇಣುಗಂಬಕ್ಕೆ ಏರಿದ ಅಪರಾಧಿಗಳು   

ನವದೆಹಲಿ:ದೆಹಲಿಯಲ್ಲಿ 2012ರ ಡಿಸೆಂಬರ್ 16ರ ಸಂಜೆ ಚಲಿಸುತ್ತಿದ್ದ ಬಸ್‌ನಲ್ಲಿ 23 ವರ್ಷದ ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಆರು ಮಂದಿ ಅತ್ಯಾಚಾರಿಗಳು ಅವರ ಮೇಲೆ ಬರ್ಬರವಾಗಿ ಹಲ್ಲೆ ಮಾಡಿ, ಬಸ್‌ನಿಂದ ಎಸೆದಿದ್ದರು. ಸಿಂಗಪುರದ ಆಸ್ಪತ್ರೆಯಲ್ಲಿ ಆಕೆ ಕೊನೆಯುಸಿರೆಳೆದರು. ಇದಾಗಿ, ಏಳು ವರ್ಷ ಬಳಿಕ ಆರು ಜನರ ಪೈಕಿ ನಾಲ್ವರಿಗೆ ನೇಣು ಶಿಕ್ಷೆಯಾಗಿದೆ.

ರಾಮ್‌ಸಿಂಗ್: ಆರು ಆರೋಪಿಗಳ ಪೈಕಿ ರಾಮ್‌ಸಿಂಗ್ ಎಂಬಾತ ಆತ್ಯಾಚಾರ ನಡೆದಿದ್ದ ಬಸ್‌ನ ಚಾಲಕ. ರವಿದಾಸ್ ಕ್ಯಾಂಪ್ ಎಂಬ ಕೊಳೆಗೇರಿಯಲ್ಲಿ ಮೊದಲಿಗೆ ಈತನನ್ನು ಬಂಧಿಸಲಾಯಿತು. ಉಳಿದವರ ಸುಳಿವು ಈತನಿಂದ ಸಿಕ್ಕಿತು. ಆದರೆ, 2013ರ ಮಾರ್ಚ್ 10ರಂದು ರಾಮ್‌ಸಿಂಗ್ ತಿಹಾರ್ ಜೈಲಿನಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂದು ಪೊಲೀಸರು ಹೇಳಿದ್ದರು. ಜೈಲಿನಲ್ಲಿ ಕೊಲೆ ಮಾಡಲಾಗಿದೆ ಎಂದು ರಾಮ್‌ಸಿಂಗ್ ಸಂಬಂಧಿಕರು ಆರೋಪಿಸಿದ್ದರು.

ಮುಕೇಶ್ ಸಿಂಗ್: ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಮುಕೇಶ್ ಸಿಂಗ್‌ನನ್ನು ರಾಜಸ್ಥಾನದ ಕರೋಲಿ ಎಂಬಲ್ಲಿ ಬಂಧಿಸಲಾಗಿತ್ತು. ಕೃಷಿ ಜಮೀನಿನ ಮಧ್ಯದಲ್ಲಿದ್ದ ಆತನ ಗುಡಿಸಲನ್ನು ತಲುಪಲು ಪೊಲೀಸರು ನದಿಯಲ್ಲಿ ಈಜಿಕೊಂಡು ಹೋಗಿದ್ದರು. ಶುಕ್ರವಾರ ನೇಣಿಗೆ ಕೊರಳೊಡ್ಡಿದ ಈತ ರಾಮ್‌ಸಿಂಗ್‌ನ ಸಹೋದರ.

ADVERTISEMENT

ಪವನ್ ಗು‍‍ಪ್ತಾ: ನೇಣಿಗೆ ಹಾಕಲಾದ ಎರಡನೇ ಅಪರಾಧಿ ಪವನ್ ಗುಪ್ತಾ. ರವಿದಾಸ್‌ ಕ್ಯಾಂಪ್‌ನಲ್ಲಿ ನೆಲೆಸಿದ್ದ ಈತನ ವೃತ್ತಿ ಹಣ್ಣಿನ ವ್ಯಾಪಾರ. ತನಿಖೆಗೆ ರಾಮ್‌ಸಿಂಗ್ ಮನೆಗೆ ಹೋಗಿದ್ದ ಪೊಲೀಸರು ಈತನನ್ನು ಬಂಧಿಸಿದ್ದರು. ಘಟನೆ ನಡೆದ ದಿನ ಗುಪ್ತಾ ಬಸ್‌ನಲ್ಲಿ ಇರಲಿಲ್ಲ ಎಂದು ಕುಟುಂಬದವರು ವಾದಿಸಿದ್ದರು. ಆದರೆ ಆತನ ಮೊಬೈಲ್ ಮಾಹಿತಿ ಪ್ರಕಾರ, ಆತ ಬಸ್‌ನಲ್ಲೇ ಇದ್ದ ಎಂಬುದು ದೃಢಪಟ್ಟಿತ್ತು.

ವಿನಯ್ ಶರ್ಮಾ: ನೇಣು ಕುಣಿಕೆಗೆ ಕೊರಳೊಡ್ಡಿದ ಮೂರನೇ ವ್ಯಕ್ತಿ ವಿನಯ್ ಶರ್ಮಾ ಮೂಲತಃ ಜಿಮ್ ತರಬೇತುದಾರ. ಈತನೂ ರವಿದಾಸ್‌ಪುರ ಕ್ಯಾಂಪ್ ನಿವಾಸಿ. ಜಿಮ್ ಹೊರಗಡೆ ಈತನನ್ನು ಬಂಧಿಸಲಾಗಿತ್ತು. ಘಟನೆ ನಡೆದಾಗ ತಾನು ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದೆ ಎಂದು ಹೇಳಿಕೊಂಡಿದ್ದ. 2016ರಲ್ಲಿ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದ. ಕಳೆದ ತಿಂಗಳು ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡು ಹಣೆಗೆ ಗಾಯ ಮಾಡಿಕೊಂಡಿದ್ದ.

ಅಕ್ಷಯ್ ಕುಮಾರ್ ಸಿಂಗ್: ನೇಣಿಗೆ ಹಾಕಲಾದ ನಾಲ್ಕನೇ ವ್ಯಕ್ತಿ ಅಕ್ಷಯ್ ಸಿಂಗ್. ರಾಮ್‌ ಸಿಂಗ್ ಜತೆ ಬಸ್‌ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಬಿಹಾರದ ತೊಂಡ್ವಾ ಗ್ರಾಮದಲ್ಲಿ ಈತನನ್ನು ಬಂಧಿಸಲಾಗಿತ್ತು. ಈತನ ಪತ್ನಿಯು ಬಿಹಾರ ಕೋರ್ಟ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಳು.

ಬಾಲಾಪರಾಧಿ: ಕೊನೆಯದಾಗಿ ಬಂಧಿತನಾದ ಆರನೇ ಆರೋಪಿಗೆ ಘಟನೆ ನಡೆದಾಗ 18 ವರ್ಷವೂ ತುಂಬಿರಲಿಲ್ಲ. ಈತನನ್ನು ಆನಂದ್‌ ವಿಹಾರ್‌ನ ಮನೆಯಿಂದ ಬಂಧಿಸಲಾಗಿತ್ತು. ಬಸ್‌ ಹತ್ತುವ ಪ್ರಯಾಣಿಕರನ್ನು ಪ್ರಶಂಸಿಸುವುದರಲ್ಲಿ ಈತ ನಿಪುಣ. ಇದೇ ಸುಳಿವಿನ ಮೇಲೆ ಪೊಲೀಸರು ಬಂಧಿಸಿದ್ದರು. ಬಾಲಾಪರಾಧಿಯಾದ ಕಾರಣಕ್ಕೆ ಈತನನ್ನು ಬಾಲನ್ಯಾಯ ಕಾಯ್ದೆ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಬಾಲಗೃಹದಲ್ಲಿ ಕಳೆದ ಈತ ಈಗ ಬಿಡುಗಡೆ ಆಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.