ADVERTISEMENT

Delhi Chalo | ಯುವ ರೈತನ ಸಾವನ್ನು ಕೊಲೆ ಪ್ರಕರಣ ಎಂದು ದಾಖಲಿಸಿಲು SKM ಪಟ್ಟು

ಪಿಟಿಐ
Published 22 ಫೆಬ್ರುವರಿ 2024, 16:07 IST
Last Updated 22 ಫೆಬ್ರುವರಿ 2024, 16:07 IST
<div class="paragraphs"><p>ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳ ಗಿಡಯಲ್ಲಿರುವ ಶಂಭು ಬಳಿ ಪೊಲೀಸರು ತಡೆಗೋಡೆ ನಿರ್ಮಿಸಿದ್ದು ದೆಹಲಿಯೊಳಗೆ ರೈತರ ಪ್ರವೇಶಿಸಿದಂತೆ ನಿರ್ಬಂಧಿಸಿದ್ದಾರೆ</p></div>

ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳ ಗಿಡಯಲ್ಲಿರುವ ಶಂಭು ಬಳಿ ಪೊಲೀಸರು ತಡೆಗೋಡೆ ನಿರ್ಮಿಸಿದ್ದು ದೆಹಲಿಯೊಳಗೆ ರೈತರ ಪ್ರವೇಶಿಸಿದಂತೆ ನಿರ್ಬಂಧಿಸಿದ್ದಾರೆ

   

ರಾಯಿಟರ್ಸ್ ಚಿತ್ರ

ಚಂಡೀಗಢ: ಪಂಜಾಬ್–ಹರಿಯಾಣ ಗಡಿ ಪ್ರದೇಶದಲ್ಲಿ ಪೊಲೀಸರೊಂದಿಗಿನ ಸಂಘರ್ಷದಲ್ಲಿ ಮೃತಪಟ್ಟ ಯುವ ರೈತನ ಸಾವನ್ನು ಕೊಲೆ ಎಂದು ಪ್ರಕರಣ ದಾಖಲಿಸಲು ಸಂಯುಕ್ತ ಕಿಸಾನ್ ಮೋರ್ಚಾ (SKM) ಆಗ್ರಹಿಸಿದೆ. ಜತೆಗೆ ಕರಾಳ ದಿನ ಆಚರಣೆ ಮತ್ತು ಘಟನೆ ಖಂಡಿಸಿ ಟ್ರ್ಯಾಕ್ಟರ್ ಜಾಥಾ ನಡೆಸಲು ಉದ್ದೇಶಿಸಿದೆ.

ADVERTISEMENT

ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೆಹಲಿ ಚಲೋ ಹಮ್ಮಿಕೊಂಡಿದ್ದ ರೈತರನ್ನು ಖನೌರಿ ಗಡಿ ಬಳಿ ತಡೆಯಲಾಗಿತ್ತು. ಈ ವೇಳೆ ಪಂಜಾಬ್ ರೈತರು ಮತ್ತು ಹರಿಯಾಣ ಪೊಲೀಸರ ನಡುವೆ ಬುಧವಾರ ನಡೆದ ಸಂಘರ್ಷದಲ್ಲಿ ಶುಭಕರಣ್ ಸಿಂಗ್ (21) ಎಂಬ ಯುವ ರೈತ ಮೃತಪಟ್ಟಿದ್ದರು. 

ಈ ಘಟನೆ ಖಂಡಿಸಿ ಫೆ. 26ರಂದು ದೇಶವ್ಯಾಪಿ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಜಾಥಾ ನಡೆಸಲು ರೈತ ಸಂಘಟನೆಗಳು ಉದ್ದೇಶಿಸಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಅವರ ಪ್ರತಿಕೃತಿಗಳನ್ನು ಶುಕ್ರವಾರ ದಹಿಸಲು ಉದ್ದೇಶಿಸಲಾಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

‘ಮೃತ ರೈತನ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಬೇಕು. ಇದನ್ನು ಕೊಲೆ ಎಂದು ಪ್ರಕರಣ ದಾಖಲಿಸಬೇಕು’ ಎಂದು ಎಸ್‌ಕೆಎಂ ಮುಖಂಡ ಬಲ್ಬೀರ್ ಸಿಂಗ್ ರಾಜೆವಾಲಾ ತಿಳಿಸಿದ್ದಾರೆ.

ದೆಹಲಿ ಚಲೋ ಭಾಗವಾಗಿ ಖನೌರಿ ಮತ್ತು ಶಂಭು ಗಡಿಯಲ್ಲಿ ರೈತರು ಬೀಡು ಬಿಟ್ಟಿದ್ದು, ಹೋರಾಟದ ಮುಂದಿನ ರೂಪುರೇಷೆ ಕುರಿತು ಎಸ್‌ಕೆಎಂ ಗುರುವಾರ ಸಭೆ ನಡೆಸಿತು. ಸಭೆಯಲ್ಲಿ ಪಂಜಾಬ್, ಹರಿಯಾಣ ಹಾಗೂ ದೇಶದ ಇತರ ರಾಜ್ಯಗಳ ರೈತ ಮುಖಂಡರು ಪಾಲ್ಗೊಂಡಿದ್ದರು.

ಶುಭಕರಣ್ ಸಿಂಗ್ ನಿಧನದ ನಂತರ ಮುಷ್ಕರನ್ನು ಎರಡು ದಿನಗಳ ಅವಧಿಗೆ ಮುಂದೂಡಲಾಗಿತ್ತು. ಹೋರಾಟದ ಮುಂದಿನ ರೂಪುರೇಷೆಗಳನ್ನು ಶುಕ್ರವಾರ ಸಂಜೆಯೊಳಗೆ ನಿರ್ಧರಿಸಲಾಗುವುದು ಎಂದು ಮುಖಂಡರು ಹೇಳಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಜದೂರ್ ಮೋರ್ಚಾ ಜತೆಗೂಡಿ ದೆಹಲಿ ಚಲೋ ಜಾಥಾ ಆಯೋಜಿಸಿದ್ದವು. ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಪಟ್ಟು ಹಿಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.