ADVERTISEMENT

ಕೊರೊನಾ ಪರಿಣಾಮ | ಮೆಟ್ರೊ ಸ್ಮಾರ್ಟ್‌ಕಾರ್ಡ್‌ ಕಡ್ಡಾಯ?

ಸಿಬ್ಬಂದಿ, ಪ್ರಯಾಣಿಕರ ಆರೋಗ್ಯ ತಪಾಸಣೆ, ಮಾಸ್ಕ್‌ ಬಳಕೆಗೆ ನಿಯಮ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 21:02 IST
Last Updated 30 ಏಪ್ರಿಲ್ 2020, 21:02 IST
   

ನವದೆಹಲಿ: ಲಾಕ್‌ಡೌನ್‌ ತೆರವಾದ ನಂತರ ಮೆಟ್ರೊ ರೈಲುಗಳು ಸಂಚಾರ ಆರಂಭಿಸಿದಾಗ, ಪ್ರಯಾಣಕ್ಕೆ ಸ್ಮಾರ್ಟ್‌ಕಾರ್ಡ್‌ ಕಡ್ಡಾಯಗೊಳಿಸುವ ಸಾಧ್ಯತೆ ಇದೆ.

ಸಂಪರ್ಕ ರಹಿತ ಪ್ರಯಾಣ ಹಾಗೂ ಅಂತರ ಕಾಯ್ದುಕೊಳ್ಳುವ ಪ್ರಕ್ರಿಯೆಯನ್ನು ಮೆಟ್ರೊದ ನಿರ್ವಹಣಾ ನಿಯಮಗಳಲ್ಲಿ ಸೇರ್ಪಡೆಗೊಳಿಸಲುಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಚಿಂತನೆ ನಡೆಸುತ್ತಿದೆ. ಇದರ ಅನ್ವಯ, ಟೋಕನ್‌ ವ್ಯವಸ್ಥೆ ರದ್ದುಪಡಿಸಿ ಈ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.

ಸ್ವಯಂಚಾಲಿತ ಶುಲ್ಕ ಸಂಗ್ರಹ ದ್ವಾರಗಳ (ಎಎಫ್‌ಸಿ) ಬಳಿ ಸ್ಮಾರ್ಟ್‌ಕಾರ್ಡ್‌ಗಳನ್ನು ತೋರಿಸಿದರೆ ಸಾಕಾಗುತ್ತದೆ. ಆದರೆ ಟೋಕನ್‌ ಬಳಸುವವರು ಎಎಫ್‌ಸಿ ಮೆಷಿನ್‌ಗಳಲ್ಲಿ ಟೋಕನ್‌ ಹಾಕಲು ಅವುಗಳನ್ನು ಮುಟ್ಟಲೇಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಟೋಕನ್‌ಗಳ ಖರೀದಿಗೆ ಪ್ರಯಾಣಿಕರು ಕೌಂಟರ್‌ಗಳಲ್ಲಿ ಅಥವಾ ಮಷಿನ್‌ಗಳ ಎದುರು ಸರದಿಯಲ್ಲಿ ಕಾಯಬೇಕು. ಬದಲಿಗೆ ಸ್ಮಾರ್ಟ್‌
ಕಾರ್ಡ್‌ಗಳನ್ನು ಬಳಸುವುದಾದರೆ ಮೆಟ್ರೊ ನಿಲ್ದಾಣಗಳಲ್ಲಿ ರೀಚಾರ್ಜ್‌ ಮಷಿನ್‌ ಬಳಸಬಹುದು ಅಥವಾ ಡಿಜಿಟಲ್‌ ಪಾವತಿ ಮೂಲಕ ರೀಚಾರ್ಜ್‌ ಮಾಡಿಕೊಳ್ಳಬಹುದು ಎಂದು ಅಧಿಕಾರಿ ವಿವರಿಸಿದ್ದಾರೆ.

ಆರೋಗ್ಯ ತಪಾಸಣೆ ಕಡ್ಡಾಯ: ಮೆಟ್ರೊ ನಿಲ್ದಾಣಗಳಲ್ಲಿ ಸಿಬ್ಬಂದಿ ಹಾಗೂ ಪ್ರಯಾಣಿಕರ ಆರೋಗ್ಯ ತಪಾಸಣೆ ಕಡ್ಡಾಯಗೊಳಿಸುವುದು, ನಿಲ್ದಾಣ ಪ್ರವೇಶಿಸುವ ವೇಳೆ ಅಂತರ ಕಾಯ್ದುಕೊಳ್ಳುವುದು, ನಿಲ್ದಾಣಗಳ ಒಳಗೆ ಪ್ರಯಾಣಿಕರು ಅಡ್ಡಾಡು
ವುದನ್ನು ತಡೆಯುವುದು, ಆರೋಗ್ಯ ಸೇತು ಆಪ್‌ಗಳ ಕಡ್ಡಾಯ ಬಳಕೆ, ಮಾಸ್ಕ್‌ಗಳನ್ನು ಧರಿಸುವುದು, ದಟ್ಟಣೆ ಹೆಚ್ಚಿರುವ ಅವಧಿಯಲ್ಲಿ ರೈಲುಗಳ ಸಂಚಾರ ಹೆಚ್ಚಿಸುವುದು ಸಹ ನಿರ್ವಹಣಾ ನಿಯಮಗಳಲ್ಲಿ ಸೇರಲಿದೆ ಎಂದು ಅವರು ಹೇಳಿದ್ದಾರೆ.

ಲಾಕ್‌ಡೌನ್‌ ಬಳಿಕ ಮೆಟ್ರೊ ಸೇವೆ ಆರಂಭವಾದಾಗ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕೈಗೊಳ್ಳ
ಬೇಕಿರುವ ಅಗತ್ಯ ಕ್ರಮಗಳ ಕುರಿತು ಸಚಿವಾಲಯದ ಪ್ರಮುಖ ಅಧಿಕಾರಿಗಳು ಈಗಾಗಲೇ ಚರ್ಚೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.