ADVERTISEMENT

ಕಳಂಕಿತರನ್ನು ಪಂಜಾಬ್ ಸಂಪುಟಕ್ಕೆ ಸೇರಿಸಿಕೊಳ್ಳದಂತೆ ಕಾಂಗ್ರೆಸ್ ನಾಯಕರ ಪತ್ರ

ಪಿಟಿಐ
Published 26 ಸೆಪ್ಟೆಂಬರ್ 2021, 9:54 IST
Last Updated 26 ಸೆಪ್ಟೆಂಬರ್ 2021, 9:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಂಡೀಗಡ: ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಚನ್ನಿ ನೇತೃತ್ವದ ಪಂಜಾಬ್ ಸರ್ಕಾರದ ಮೊದಲ ಕ್ಯಾಬಿನೆಟ್ ವಿಸ್ತರಣೆಗೆ ಕೆಲವು ಗಂಟೆಗಳ ಮೊದಲು, ರಾಜ್ಯದ ಕಾಂಗ್ರೆಸ್ ನಾಯಕರ ಗುಂಪೊಂದು ಭಾನುವಾರ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧುಗೆ ಪತ್ರ ಬರೆದಿದೆ. 'ಕಳಂಕಿತ' ಮಾಜಿ ಸಚಿವ ರಾಣಾ ಗುರ್ಜಿತ್ ಸಿಂಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.

'ಕಳಂಕ ರಹಿತ ದಲಿತ ನಾಯಕನಿಗೆ ಪ್ರಾತಿನಿಧ್ಯ ನೀಡುವ ಮೂಲಕ' ಸಂಪುಟ ಸ್ಥಾನವನ್ನು ತುಂಬಬಹುದು ಎಂದು ನಾಯಕರು ಒತ್ತಾಯಿಸಿದ್ದಾರೆ. ಇದಲ್ಲದೆ ಪತ್ರದ ಪ್ರತಿಯನ್ನು ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಚನ್ನಿ ಅವರಿಗೂ ಕಳುಹಿಸಲಾಗಿದೆ.

ಪಂಜಾಬ್ ಸಂಪುಟಕ್ಕೆ ಏಳು ಹೊಸ ಮುಖಗಳನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದ್ದು, ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರದ ಭಾಗವಾಗಿದ್ದ ಐವರು ಸಚಿವರನ್ನು ಕೈಬಿಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮೂಲಗಳ ಪ್ರಕಾರ, ಪರ್ಗತ್ ಸಿಂಗ್, ರಾಜ್ ಕುಮಾರ್ ವರ್ಕಾ, ಗುರ್ಕೀರತ್ ಸಿಂಗ್ ಕೊಟ್ಲಿ, ಸಂಗತ್ ಸಿಂಗ್ ಗಿಲ್ಜಿಯಾನ್, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಕುಲ್ಜಿತ್ ನಾಗ್ರಾ ಮತ್ತು ರಾಣಾ ಗುರ್ಜಿತ್ ಸಿಂಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದ್ದು, ಅಂತಿಮ ಹೆಸರುಗಳ ಪಟ್ಟಿಯನ್ನು ಅಧಿಕೃತವಾಗಿ ಘೋಷಿಸಬೇಕಿದೆ.

ಚನ್ನಿ, ಸಿಧು ಮತ್ತು ಇತರ ನಾಯಕರು ಪಕ್ಷದ ಹಿರಿಯ ನಾಯಕತ್ವದೊಂದಿಗೆ ಮೊದಲ ಕ್ಯಾಬಿನೆಟ್ ವಿಸ್ತರಣೆಗೆ ಹೆಸರುಗಳನ್ನು ಅಂತಿಮಗೊಳಿಸಲು ಹಲವು ದಿನಗಳ ಕಾಲ ಸಮಾಲೋಚನೆ ನಡೆಸಿದ್ದರು. ಬಳಿಕ ರಾಣಾ ಗುರ್ಜಿತ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಬೇಡ ಎಂದು ಸಿಧುಗೆ ಮಾಜಿ ಪಿಪಿಸಿಸಿ ಮುಖ್ಯಸ್ಥರು ಸೇರಿದಂತೆ ಏಳು ಕಾಂಗ್ರೆಸ್ ಮುಖಂಡರು ಪತ್ರ ಬರೆದಿದ್ದಾರೆ.

ಮರಳು ಗಣಿಗಾರಿಕೆ ಒಪ್ಪಂದಗಳ ಹರಾಜಿನಲ್ಲಿ ಅಕ್ರಮ ನಡೆದಿದೆ ಎಂದು ಪ್ರತಿಪಕ್ಷಗಳು ರಾಣಾ ಗುರ್ಜಿತ್ ಸಿಂಗ್ ಮೇಲೆ ಆರೋಪ ಮಾಡಿದ ನಂತರ 2018 ರಲ್ಲಿ ಅಮರಿಂದರ್ ಸಿಂಗ್ ಸಂಪುಟಕ್ಕೆ ಗುರ್ಜಿತ್ ಸಿಂಗ್ ಅವರು ರಾಜೀನಾಮೆ ನೀಡಬೇಕಾಯಿತು. ಆ ವೇಳೆ ಅವರು ನೀರಾವರಿ ಮತ್ತು ವಿದ್ಯುತ್ ಖಾತೆಗಳನ್ನು ಹೊಂದಿದ್ದರು.

ಸಿಧುಗೆ ಬರೆದ ಪತ್ರದಲ್ಲಿ, ರಾಣಾ ಗುರ್ಜಿತ್ ಸಿಂಗ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿರುವ ನಾಯಕರು, 'ಅವರು ದೋಬಾದ ಭ್ರಷ್ಟ ಮತ್ತು ಕಳಂಕಿತ ರಾಜಕಾರಣಿ' ಎಂದು ಆರೋಪಿಸಿದ್ದಾರೆ.

ಮೊಹಿಂದರ್ ಸಿಂಗ್ ಕೇಪೀ, ಮಾಜಿ ಪಿಪಿಸಿಸಿ ಅಧ್ಯಕ್ಷ, ಶಾಸಕ ಸುಲ್ತಾನಪುರ ನವತೇಜ್ ಸಿಂಗ್ ಚೀಮಾ, ಶಾಸಕ ಫಗ್ವಾರ ಬಲ್ವಿಂದರ್ ಸಿಂಗ್ ಧಲಿವಾಲ್, ಜಲಂಧರ್ ಉತ್ತರ ಶಾಸಕ ಬಾವಾ ಹೆನ್ರಿ, ಚಬ್ಬೇವಾಲ್ ಶಾಸಕ ರಾಜ್ ಕುಮಾರ್, ಶಾಸಕ ಶಾಮ್ ಚುರಾಸಿ, ಪವನ್ ಆದಿಯಾ ಮತ್ತು ಭೋಲಾತ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರು ಪತ್ರ ಬರೆದಿದ್ದಾರೆ.

ಖೈರಾ ಅವರು ಆಮ್ ಆದ್ಮಿ ಪಕ್ಷದಿಂದ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.