ADVERTISEMENT

ಗುಜರಾತ್‌ನ ಸೋಮನಾಥದಲ್ಲಿ ಶೌರ್ಯಯಾತ್ರೆ; ಡಮರು ಬಾರಿಸಿದ ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 14:01 IST
Last Updated 11 ಜನವರಿ 2026, 14:01 IST
<div class="paragraphs"><p>ಡಮರು ಬಾರಿಸಿದ ಪ್ರಧಾನಿ ನರೇಂದ್ರ ಮೋದಿ–ಪಿಟಿಐ ಚಿತ್ರ</p></div>

ಡಮರು ಬಾರಿಸಿದ ಪ್ರಧಾನಿ ನರೇಂದ್ರ ಮೋದಿ–ಪಿಟಿಐ ಚಿತ್ರ

   

ಸೋಮನಾಥ (ಗುಜರಾತ್‌): ಸೋಮನಾಥ ದೇವಾಲಯದ ಆವರಣದಲ್ಲಿ ಭಾನುವಾರ ನಡೆದ ‘ಶೌರ್ಯಯಾತ್ರೆ’ಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯದ ವಿವಿಧೆಡೆಯಿಂದ ಬಂದಿದ್ದ 108 ಅಶ್ವಾರೋಹಿಗಳ ತಂಡದ ಜೊತೆಗೆ ‘ಡಮರು’ ಬಾರಿಸಿದ ಯುವಕರ ತಂಡವು ಆತ್ಮೀಯವಾಗಿ ಸ್ವಾಗತಿಸಿತು.

ಇಲ್ಲಿನ ಶಂಖ ವೃತ್ತದಿಂದ ತೆರೆದ ವಾಹನದಲ್ಲಿ ಮೆರವಣಿಗೆ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯದ ಮುಂಭಾಗದಲ್ಲಿರುವ ವೀರ್ ಹಮೀರ್‌ಜಿ ವೃತ್ತದವರೆಗೂ ಸಾಗಿದರು. ಈ ವೇಳೆ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌, ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಜೊತೆಗಿದ್ದರು. 

ADVERTISEMENT

ಡಮರು ಬಾರಿಸಿದ ಗುಂಪು ಕೂಡ ಮೆರವಣಿಗೆಯಲ್ಲಿ ಸಾಗಿತು. ಪ್ರಧಾನಿ ಕೂಡ ಡಮರು ಬಾರಿಸಿ, ನಂತರ ಅದನ್ನು ಭದ್ರತಾ ಪಡೆಗಳಿಗೆ ಹಸ್ತಾಂತರಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಹಾದುಹೋಗುತ್ತಿದ್ದ ಕಲಾವಿದರ ಮೇಲೆ ಹೂಮಳೆಗರೆದರು. ಮಾರ್ಗದಲ್ಲಿ ಅಲ್ಲಲ್ಲಿ ನಿರ್ಮಿಸಿದ್ದ ವೇದಿಕೆಗಳಲ್ಲಿ, ಕಲಾವಿದರು ಕಲಾಪ್ರದರ್ಶನ ನೀಡಿದರು.

ಬಿಳಿ ಅಂಗಿ, ಖಾಕಿ ಪ್ಯಾಂಟ್‌, ಕೇಸರಿ ಬಣ್ಣದ ರುಮಾಲು ಧರಿಸಿದ್ದ 108 ಅಶ್ವರೋಹಿಗಳ ತಂಡವು ಶೌರ್ಯಯಾತ್ರೆಯ ಮೆರವಣಿಗೆಯಲ್ಲಿ ಗಮಸೆಳೆಯಿತು. 

‘ಈ ಕುದುರೆಗಳು ಹಾಗೂ ಅವುಗಳ ಸವಾರರನ್ನು ಗುಜರಾತ್‌ನ ವಿವಿಧೆಡೆಯಿಂದ ಕರೆತರಲಾಗಿದೆ. ನಾವೆಲ್ಲರೂ ಗುಜರಾತ್‌ ಪೊಲೀಸ್‌ ಇಲಾಖೆಗೆ ಸೇರಿದ್ದು, ಕಳೆದೊಂದು ವಾರದಿಂದ ಅಭ್ಯಾಸ ನಡೆಸಿದ್ದೇವೆ. ನಾನು ಪಠಾಣ್‌ ಜಿಲ್ಲೆಯಲ್ಲಿ ಕಾನ್‌ಸ್ಟೆಬಲ್‌ ಆಗಿ ಕೆಲಸ ಮಾಡುತ್ತಿದ್ದು, ಈ ಶೌರ್ಯ ಯಾತ್ರೆಯಲ್ಲಿ ಭಾಗವಹಿಸಿರುವುದಕ್ಕೆ ಹೆಮ್ಮೆಯಾಗಿದೆ’ ಎಂದು ಭರತ್‌ ಕುಮಾರ್‌ ಸಂತಸ ವ್ಯಕ್ತಪಡಿಸಿದರು.

‘ನಾನು ಸವಾರಿ ಮಾಡಿದ ಕುದುರೆಗೆ 17 ವರ್ಷ ವಯಸ್ಸಾಗಿದ್ದು, ಕಥಿಯಾವಾರಿ– ಮಾರ್ವಾರಿಯ ಮಿಶ್ರತಳಿಯಾಗಿದೆ. ಜಿಲ್ಲೆಯಿಂದಲೇ 10 ಕುದುರೆಗಳನ್ನು ಕರೆತಂದಿದ್ದು, ನನ್ನ ಕುದುರೆಗೆ ‘ಗರುಡ’ ಎಂದು ನಾಮಕರಣ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಸೋಮನಾಥ ಸ್ವಾಭಿಮಾನ್‌ ಪರ್ವದಲ್ಲಿ ಭಾಗವಹಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರವೇ ಇಲ್ಲಿಗೆ ಭೇಟಿ ನೀಡಿದ್ದು, ಭಾನುವಾರ ಬೆಳಿಗ್ಗೆ ಮೆರವಣಿಗೆಯಲ್ಲಿ ಭಾಗವಹಿಸಿ, ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪರ್ವದ ಅಂಗವಾಗಿ ಜನವರಿ 8ರಿಂದ 11ರವರೆಗೆ ವಿಶೇಷ ಕಾರ್ಯಕ್ರಮಗಳು ಜರುಗಿದವು.

‘ನಮ್ಮ ನಾಗರಿಕತೆಯ ಧೈರ್ಯದ ಸಂಕೇತವಾದ ಸೋಮನಾಥದಲ್ಲಿ ಇರುವುದು ಹೆಮ್ಮೆಯೆನಿಸಿದೆ’ ಎಂದು ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.