ADVERTISEMENT

ಜಿ–23 ಬಣದ ಗುಲಾಮ್ ನಬಿ ಆಜಾದ್– ಸೋನಿಯಾ ಗಾಂಧಿ ಇಂದು ಭೇಟಿ ಸಾಧ್ಯತೆ

ಪಿಟಿಐ
Published 18 ಮಾರ್ಚ್ 2022, 11:06 IST
Last Updated 18 ಮಾರ್ಚ್ 2022, 11:06 IST
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಮ್ ನಬಿ ಆಜಾದ್: ಪಿಟಿಐ ಚಿತ್ರ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಮ್ ನಬಿ ಆಜಾದ್: ಪಿಟಿಐ ಚಿತ್ರ   

ನವದೆಹಲಿ: ಜಿ-23 ಬಣದ ನಾಯಕ ಗುಲಾಂ ನಬಿ ಆಜಾದ್ ಅವರು ಇಂದು(ಶುಕ್ರವಾರ) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಗುರುವಾರ ಸಭೆ ನಡೆಸಿದ್ದ ಕಾಂಗ್ರೆಸ್‌ನ ಭಿನ್ನಮತೀಯ ಗುಂಪಿನ ಸದಸ್ಯರು ಪಕ್ಷದಲ್ಲಿ ಇದ್ದುಕೊಂಡೇ ಪಕ್ಷವನ್ನು ಬಲಪಡಿಸಲು ಹೋರಾಡುವುದಾಗಿ ಪ್ರತಿಪಾದಿಸಿದ್ದಾರೆ.

ಪಕ್ಷವನ್ನು ಬಲಪಡಿಸಲು ಮಾಡಬಹುದಾದ ಅಗತ್ಯ ಬದಲಾವಣೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿರುವುದಾಗಿ ಭಿನ್ನಮತೀಯ ಗುಂಪಿನ ಮೂಲಗಳು ತಿಳಿಸಿವೆ. ‘ಬಲಿಷ್ಠ ಕಾಂಗ್ರೆಸ್ ಪಕ್ಷ ಮಾತ್ರವೇ ಭಾರತದ ಕಲ್ಪನೆಯನ್ನು ಉಳಿಸಲು ಸಾಧ್ಯ. ಈ ಸಲುವಾಗಿ ಸಂಘಟನೆಯನ್ನು ಬಲಪಡಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ ಎಂಬುದನ್ನು ನಾಯಕತ್ವಕ್ಕೆ ತಿಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ’ಎಂದು ಮೂಲಗಳು ತಿಳಿಸಿವೆ.

ಬುಧವಾರ, ಭಿನ್ನಮತೀಯರ ಸರಣಿ ಸಭೆಗಳಿಗೂ ಮುನ್ನವೇ ಸೋನಿಯಾ ಗಾಂಧಿ, ಆಜಾದ್ ಅವರನ್ನು ಸಂಪರ್ಕಿಸಿದ್ದರು ಎಂದು ತಿಳಿದುಬಂದಿದೆ.

ADVERTISEMENT

ಕಾಂಗ್ರೆಸ್‌ನಲ್ಲಿ ಸಾಮೂಹಿಕ ನಾಯಕತ್ವಕ್ಕಾಗಿ ಒತ್ತಾಯಿಸಿ ಜಿ–23 ಸದಸ್ಯರು ಗುಲಾಮ್ ನಬಿ ಆಜಾದ್ ಅವರ ನಿವಾಸದಲ್ಲಿ ಸರಣಿ ಸಭೆಗಳನ್ನು ನಡೆಸಿದ ಒಂದು ದಿನದ ನಂತರ, ಆ ಬಣದ ಸದಸ್ಯರಲ್ಲೊಬ್ಬರಾದ ಭೂಪಿಂದರ್ ಸಿಂಗ್ ಹೂಡಾ ಅವರು ಗುರುವಾರ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಉಭಯ ನಾಯಕರು ಭಿನ್ನಮತೀಯರ ಪ್ರಮುಖ ಬೇಡಿಕೆಯಾದ ಪಕ್ಷದ ಸಂಘಟನೆಯ ಪುನರುಜ್ಜೀವನದ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಗುರುವಾರ, ರಾಹುಲ್ ಗಾಂಧಿ ಜೊತೆಗಿನ ಮಾತುಕತೆ ಬಳಿಕ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು, ಗುಲಾಮ್ ನಬಿ ಆಜಾದ್ ಅವರನ್ನು ಅವರ ನಿವಾಸದಲ್ಲೇ ಭೇಟಿ ಮಾಡಿದ್ದರು.

ಹೂಡಾ ಮತ್ತು ಆಜಾದ್ ಅವರು ಕಾಂಗ್ರೆಸ್ ಅನ್ನು ಬಲಪಡಿಸಲು ಮಾಡಬಹುದಾದ ಸಮಗ್ರ ಬದಲಾವಣೆ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯಸಭೆಯ ಕಾಂಗ್ರೆಸ್‌ನ ಉಪನಾಯಕ ಮತ್ತು ಇನ್ನೊಬ್ಬ ಜಿ-23 ನಾಯಕರಾದ ಆನಂದ್ ಶರ್ಮಾ ಕೂಡ ಆಜಾದ್ ಅವರ ನಿವಾಸದಲ್ಲಿ ಹೂಡಾ ಜೊತೆಗಿನ ಮಾತುಕತೆ ವೇಳೆ ಹಾಜರಿದ್ದರು. ಅಲ್ಲಿ ರಾಹುಲ್ ಗಾಂಧಿ ಭೇಟಿ ವೇಳೆ ಚರ್ಚಿಸಲಾದ ವಿಷಯಗಳ ಕುರಿತಂತೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ.

ಜಿ–23 ನಾಯಕರು ಪಕ್ಷದಲ್ಲಿ ಯಾವುದೇ ಹುದ್ದೆ ಬಯಸುತ್ತಿಲ್ಲ. ಪಕ್ಷವನ್ನು ಬಲಪಡಿಸಲು ಮಾಡಬಹುದಾದಬೇಕಾದ ಬದಲಾವಣೆಗಳ ಬಗ್ಗೆಯಷ್ಟೇ ಅವರ ಬೇಡಿಕೆ ಇದೆ ಎಂದು ಹೂಡಾ ಅವರು ರಾಹುಲ್ ಗಾಂಧಿಯವರಿಗೆ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.