ADVERTISEMENT

ಸೋನಿಯಾ–ಸ್ಮೃತಿ ಮುಖಾಮುಖಿ: ನನ್ನೊಂದಿಗೆ ಮಾತನಾಡಬೇಡ ಎಂದರೇ ಕಾಂಗ್ರೆಸ್ ಅಧ್ಯಕ್ಷೆ?

ಪಿಟಿಐ
Published 28 ಜುಲೈ 2022, 11:04 IST
Last Updated 28 ಜುಲೈ 2022, 11:04 IST
ಸೋನಿಯಾ ಗಾಂಧಿ ಮತ್ತು ಸ್ಮೃತಿ ಇರಾನಿ
ಸೋನಿಯಾ ಗಾಂಧಿ ಮತ್ತು ಸ್ಮೃತಿ ಇರಾನಿ    

ನವದೆಹಲಿ: ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಸಂಸತ್ತಿನ ಉಭಯ ಕಲಾಪದಲ್ಲಿ ಗುರುವಾರ ಅಲ್ಲೋಲಕಲ್ಲೋಲ ಸೃಷ್ಟಿಯಾಗಿತ್ತು. ಈ ಹೊತ್ತಿನಲ್ಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಲೋಕಸಭೆಯ ಸಭಾಂಗಣದಲ್ಲಿ ಮುಖಾಮುಖಿಯಾಗಿದ್ದಾರೆ.

ಮುರ್ಮು ಅವರನ್ನು ‘ರಾಷ್ಟ್ರಪತ್ನಿ’ ಎಂದು ಚೌಧರಿಯವರು ಉಲ್ಲೇಖಿಸಿರುವುದು ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದೆ. ಈ ಸಂಬಂಧ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಕ್ಷಮೆಯಾಚಿಸಬೇಕು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಒತ್ತಾಯಿಸಿದ್ದಾರೆ.

ಪ್ರತಿಭಟನೆ, ಗಲಾಟೆ ಹಿನ್ನೆಲೆಯಲ್ಲಿ ಲೋಕಸಭೆಯ ಕಲಾಪವನ್ನು ಮುಂದೂಡುತ್ತಲೇ ಸೋನಿಯಾ ಗಾಂಧಿ ಅವರು ಸಂಸತ್ತಿನಿಂದ ಹೊರ ನಡೆಯುತ್ತಿದ್ದರು. ಈ ವೇಳೆ ಬಿಜೆಪಿಯ ಕೆಲ ಮಹಿಳಾ ಸದಸ್ಯರು ಸೋನಿಯಾ ಗಾಂಧಿ ಅವರ ವಿರುದ್ಧ ಘೋಷಣೆ ಕೂಗಿದ್ದಾರೆ. ಆಗ ಬಿಜೆಪಿ ಸದಸ್ಯೆ ರಮಾ ದೇವಿ ಅವರ ಬಳಿಗೆ ತೆರಳಿರುವ ಸೋನಿಯಾ, ವಿವಾದದಲ್ಲಿ ನನನ್ನು ಏಕೆ ಎಳೆದು ತರಲಾಗುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ADVERTISEMENT

ಇದನ್ನು ಗಮನಿಸಿದ ಸಚಿವೆ ಸ್ಮೃತಿ ಇರಾನಿ ಅಲ್ಲಿಗೆ ತೆರಳಿ ಸೋನಿಯಾ ವಿರುದ್ಧ ಪ್ರತಿಭಟಿಸಿದ್ದಾರೆ. ಮೊದಲಿಗೆ ಇರಾನಿಯವರ ಪ್ರತಿಭಟನೆಯನ್ನು ಸೋನಿಯಾ ನಿರ್ಲಕ್ಷಿಸಿದಂತೆ ತೋರಿದರೂ ನಂತರ, ಸಚಿವೆ ಕಡೆ ನೋಡುತ್ತಾ ಕೋಪದಿಂದ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.

‘ನನ್ನೊಂದಿಗೆ ಮಾತನಾಡಬೇಡ’ ಎಂದು ಬಿಜೆಪಿ ಸಂಸದೆಗೆ ಸೋನಿಯಾ ಗಾಂಧಿ ಹೇಳಿದ್ದರು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಆದರೆ, ಸೋನಿಯಾ ಹೀಗೆ ಪ್ರತಿಕ್ರಿಯಿಸಿದ್ದು ಸ್ಮೃತಿ ಇರಾನಿ ಅವರಿಗೇ ಎಂದು ನಿರ್ಮಲಾ ಸ್ಪಷ್ಟವಾಗಿ ಹೇಳಿಲ್ಲ.

ಎನ್‌ಸಿಪಿ ಸದಸ್ಯೆ ಸುಪ್ರಿಯಾ ಸುಳೆ ಮತ್ತು ತೃಣಮೂಲ ಸದಸ್ಯೆ ಅಪಾರ ಪೊದ್ದರ್ ಅವರು ಸೋನಿಯಾರ ಬೆಂಬಲಕ್ಕೆ ನಿಂತಂತೆ ಕಂಡು ಬಂದರು. ಬಿಜೆಪಿ ಸದಸ್ಯರು ರಮಾ ದೇವಿ ಮತ್ತು ಸೋನಿಯಾ ಅವರನ್ನು ಸುತ್ತುವರಿದಂತೆ ಕಂಡರು.

ಚೌಧರಿ ಅವರ ಹೇಳಿಕೆಯನ್ನು ವಿರೋಧಿಸಿ ಸದನದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಮಹಿಳಾ ಸದಸ್ಯರು ಲೋಕಸಭೆಯ ಮೊದಲ ಸಾಲಿನಲ್ಲೇ ಕುಳಿತಿದ್ದರು.

ನಂತರ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಮಾ ದೇವಿ, ‘ಈ ವಿವಾದದಲ್ಲಿ ನನ್ನ ಹೆಸರನ್ನು ಏಕೆ ಎಳೆಯಲಾಗುತ್ತಿದೆ? ನನ್ನದೇನು ತಪ್ಪಿದೆ? ಎಂದು ಸೋನಿಯಾ ಕೇಳಿದರು. ಚೌಧರಿಯವರನ್ನು ಲೋಕಸಭೆಯ ಕಾಂಗ್ರೆಸ್ ನಾಯಕನನ್ನಾಗಿ ಆಯ್ಕೆ ಮಾಡಿದ್ದೇ ಸೋನಿಯಾ ಗಾಂಧಿ ಅವರ ತಪ್ಪು. ಇದನ್ನೇ ಅವರಿಗೆ ಹೇಳಿದ್ದೇನೆ’ ಎಂದು ರಮಾ ದೇವಿ ಹೇಳಿದ್ದಾರೆ.

ಸಂಸತ್ತಿನ ಆವರಣದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, ‘ಬಿಜೆಪಿ ಸದಸ್ಯರನ್ನು ಸೋನಿಯಾ ಗಾಂಧಿ ಬೆದರಿಸಿ ಮಾತನಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ನೀನು ನನ್ನೊಂದಿಗೆ ಮಾತನಾಡಬೇಡ’ ಎಂದು ಸೋನಿಯಾ ಅವರು ಬಿಜೆಪಿ ಸದಸ್ಯರಿಗೆ (ಸ್ಮೃತಿ ಇರಾನಿಗೆ) ಹೇಳಿದರು ಎಂದು ಸೀತಾರಾಮನ್ ಹೇಳಿದ್ದಾರೆ.

ಚೌಧರಿ ಅವರು ಬುಧವಾರ ಲೋಕಸಭೆಯಲ್ಲಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ಸಂಬೋಧಿಸಿ ವಿವಾದ ಸೃಷ್ಟಿಸಿದ್ದರು. ಬಿಜೆಪಿ ಸದಸ್ಯರು ಚೌಧರಿ ಹೇಳಿಕೆಯನ್ನು ಖಂಡಿಸಿ, ಸಂಸತ್‌ನಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.