ADVERTISEMENT

ಉಕ್ರೇನ್‌ನಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚಿದ ಸೋನು ಸೂದ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮಾರ್ಚ್ 2022, 9:31 IST
Last Updated 3 ಮಾರ್ಚ್ 2022, 9:31 IST
ಸೋನು ಸೂದ್
ಸೋನು ಸೂದ್    

ಮುಂಬೈ: ಉಕ್ರೇನ್‍ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಬಾಲಿವುಡ್ ನಟ ಸೋನು ಸೂದ್ ಸಹಾಯ ಹಸ್ತ ಚಾಚಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ಸತತ ಒಂದು ವಾರದಿಂದ ದಾಳಿ ನಡೆಸುತ್ತಿದೆ. ಇದರಿಂದಾಗಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇದರ ನಡುವೆ ನಟ ಸೋನು ಸೂದ್ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಸೋನು ಸೂದ್ ಚಾರಿಟಿ ಫೌಂಡೇಷನ್‌ ವತಿಯಿಂದ ಸಹಾಯ ಪಡೆದಿರುವ ಬಗ್ಗೆ ವಿದ್ಯಾರ್ಥಿಗಳು ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

‘ಉಕ್ರೇನ್‍ನಲ್ಲಿರುವ ನಮ್ಮ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದು, ಈ ಕಠಿಣ ಸಮಯದಲ್ಲಿ ಅದೃಷ್ಟವಶಾತ್ ನಾವು ಅನೇಕ ವಿದ್ಯಾರ್ಥಿಗಳನ್ನು ಗಡಿ ದಾಟಿಸಿ ಸುರಕ್ಷಿತ ಪ್ರದೇಶಕ್ಕೆ ಕರೆದುಕೊಂಡು ಹೋಗಲು ಸಹಾಯ ಮಾಡಿದ್ದೇವೆ. ಹೀಗೆ ಸಹಾಯ ಮಾಡಲು ಪ್ರಯತ್ನಿಸೋಣ, ಅವರಿಗೆ ನಮ್ಮ ಅವಶ್ಯಕತೆ ಇದೆ. ಜೈ ಹಿಂದ್’ ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.

ADVERTISEMENT

ವಿದ್ಯಾರ್ಥಿನಿಯೊಬ್ಬರು ಸೋನು ಸೂದ್ ಸಹಾಯ ಕುರಿತಂತೆ ವಿಡಿಯೊವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸೂದ್, ಅದು ನನ್ನ ಕೆಲಸ. ನಾನು ನನ್ನ ಕೆಲಸವನ್ನು ಮಾಡಿದ್ದೇನೆ. ಇದರಿಂದ ನನಗೆ ಸಂತಸವಾಗಿದೆ. ನಿಮ್ಮೆಲ್ಲರ ಬೆಂಬಲಕ್ಕೆ, ಭಾರತ ಸರ್ಕಾರಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.

ಸೋನು ಸೂದ್ ಚಾರಿಟಿ ವತಿಯಿಂದ ಉಕ್ರೇನ್‌ನಲ್ಲಿ ಸ್ಥಳೀಯ ಟ್ಯಾಕ್ಸಿಗಳ ಮೂಲಕ ಭಾರತೀಯ ವಿದ್ಯಾರ್ಥಿಗಳನ್ನು ಹಾರ್ಕಿವ್‌ನ ರೈಲು ನಿಲ್ದಾಣಕ್ಕೆ ಕರೆದೊಯ್ಯಲಾಗುತ್ತದೆ. ನಂತರ ಅವರನ್ನು ಪೋಲ್ಯಾಂಡ್‌ ಗಡಿಗೆ ಸಾಗಿಸಲು ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ.

ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ವಲಸಿಗರಿಗೆ ತಮ್ಮ ಊರುಗಳಿಗೆ ತೆರಳಲು ಸಹಾಯ ಮಾಡುವ ಮೂಲಕ ಸೋನು ಸೂದ್ ಪ್ರಶಂಸೆಗೆ ಪಾತ್ರರಾಗಿದ್ದರು. ಇದೀಗ ಯುದ್ಧ ಪೀಡಿತ ಉಕ್ರೇನ್‍ನ ಹಾರ್ಕಿವ್ ನಗರದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.