ADVERTISEMENT

ನೈಋತ್ಯ ರೈಲ್ವೆ: ಟಿಕೆಟ್ ರಹಿತ ರೈಲು ಪ್ರಯಾಣಿಕರ ಸಂಖ್ಯೆ ಮತ್ತೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 2:08 IST
Last Updated 23 ಆಗಸ್ಟ್ 2022, 2:08 IST
ಸಾಂದರ್ಭಿಕ ಚಿತ್ರ – ಪಿಟಿಐ
ಸಾಂದರ್ಭಿಕ ಚಿತ್ರ – ಪಿಟಿಐ   

ಬೆಂಗಳೂರು: ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿ ಕಡಿಮೆಯಾಗಿದ್ದ ಟಿಕೆಟ್ ರಹಿತ ರೈಲು ಪ್ರಯಾಣಿಕರ ಸಂಖ್ಯೆ ಈಗ ಮತ್ತೆ ಹೆಚ್ಚಳವಾಗಿದೆ. ಟಿಕೆಟ್ ಪಡೆಯದೆ ಪ್ರಯಾಣಿಸುವವರ ಸಂಖ್ಯೆ ಈಗ ಕೋವಿಡ್ ಪೂರ್ವ ಸ್ಥಿತಿ ತಲುಪಿದ್ದು, ನೈಋತ್ಯ ರೈಲ್ವೆಗೆ ತಲೆನೋವಾಗಿ ಪರಿಣಮಿಸಿದೆ.

ಅಧಿಕೃತ ದತ್ತಾಂಶಗಳ ಪ್ರಕಾರ, 2021–22ನೇ ಸಾಲಿನಲ್ಲಿ 5.45 ಲಕ್ಷ ಟಿಕೆಟ್ ರಹಿತ ಪ್ರಯಾಣ ಪ್ರಕರಣಗಳು ಪತ್ತೆಯಾಗಿದ್ದು, ತಪ್ಪಿತಸ್ಥರಿಂದ ಒಟ್ಟು ₹ 32.16 ಕೋಟಿ ದಂಡ ಸಂಗ್ರಹಿಸಲಾಗಿದೆ.

2020–21ನೇ ಸಾಲಿನಲ್ಲಿ 1.2 ಲಕ್ಷ ಟಿಕೆಟ್ ರಹಿತ ಪ್ರಯಾಣ ಪ್ರಕರಣಗಳು ಪತ್ತೆಯಾಗಿದ್ದು, ₹ 7.29 ಕೋಟಿ ದಂಡ ಸಂಗ್ರಹಿಸಲಾಗಿತ್ತು. ಅದಕ್ಕೂ ಮೊದಲಿನ ವರ್ಷ (2019–20) 4.1 ಲಕ್ಷ ಟಿಕೆಟ್ ರಹಿತ ಪ್ರಯಾಣ ಪ್ರಕರಣಗಳು ಪತ್ತೆಯಾಗಿದ್ದು, ₹ 18.51 ಕೋಟಿ ದಂಡ ಸಂಗ್ರಹಿಸಲಾಗಿತ್ತು.

ADVERTISEMENT

ಹೆಚ್ಚಿನ ರೈಲು ಸೇವೆಗಳು ಪುನರಾರಂಭಗೊಂಡಿವೆ. ಈ ವರ್ಷ ರೈಲುಗಳ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ನೈಋತ್ಯ ರೈಲ್ವೆಯ ಬೆಂಗಳೂರು ವಾಣಿಜ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ, ಟಿಕೆಟ್ ತಪಾಸಣೆ ಕಾರ್ಯಾಚರಣೆಯನ್ನು ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.

ನೈಋತ್ಯ ರೈಲ್ವೆಯು ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರು ವಿಭಾಗಗಳನ್ನು ಹೊಂದಿದ್ದು ಕರ್ನಾಟಕದ ಶೇ 84ರಷ್ಟು ರೈಲ್ವೆ ಮಾರ್ಗ ಒಳಗೊಂಡಿದೆ.

‘ಪ್ರಯಾಣಿಕರ ಆಗಮನವಾದಾಗ ರೈಲು ನಿಲ್ದಾಣಗಳಲ್ಲಿ ಅಧಿಕಾರಿಗಳು ಟಿಕೆಟ್ ಪರಿಶೀಲನೆ ನಡೆಸುವುದು, ರೈಲುಗಳಲ್ಲಿ ಟಿಟಿಇ (ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್) ಮೂಲಕ ಪರಿಶೀಲನೆ ಹಾಗೂ ಅಧಿಕಾರಿಗಳು ದಿಢೀರ್ ಆಗಿ ರೈಲುಗಳಿಗೆ ತೆರಳಿ ಪರಿಶೀಲನೆ ನಡೆಸುವುದು, ಈ ಮೂರು ವಿಧಾನಗಳ ಮೂಲಕ ಟಿಕೆಟ್ ತಪಾಸಣೆ ನಡೆಸಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಅಸಮರ್ಪಕ ಟಿಕೆಟ್‌ ಖರೀದಿಸಿ (ಟಿಕೆಟ್ ಪಡೆದ ನಿಲ್ದಾಣಕ್ಕಿಂತಲೂ ಹೆಚ್ಚು ದೂರ ಪ್ರಯಾಣಿಸುವುದು, ತಪ್ಪಾದ ಕೋಚ್‌ಗಳಲ್ಲಿ ಪ್ರಯಾಣಿಸುವುದು) ಪ್ರಯಾಣಿಸುವವರ ಸಂಖ್ಯೆ ಈ ವರ್ಷ ಹೆಚ್ಚಳವಾಗಿಲ್ಲ. ಸುಮಾರು 1,000 ಪ್ರಕರಣ ವರದಿಯಾಗಿದ್ದು, ₹ 23 ಲಕ್ಷ ದಂಡ ಸಂಗ್ರಹಿಸಲಾಗಿದೆ. 2020–21ರಲ್ಲಿ ಸಹ ಈ ಪ್ರಕರಣಗಳ ಸಂಖ್ಯೆ 1,000ದಷ್ಟಿತ್ತು. ₹ 68 ಲಕ್ಷ ದಂಡ ಸಂಗ್ರಹಿಸಲಾಗಿತ್ತು. ಪ್ಯಾಸೆಂಜರ್‌ ರೈಲುಗಳಲ್ಲೇ ಇಂಥ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಕೋವಿಡ್‌ ನಂತರ ರೈಲು ಸೇವೆ ಬಹುತೇಕ ಪೂರ್ಣ ಪ್ರಮಾಣದಲ್ಲಿ ಮೊದಲಿನ ಸ್ಥಿತಿಗೆ ಮರಳಿದೆ. ವಲಯವಾರು ಟಿಕೆಟ್ ತಪಾಸಣೆ ಹೆಚ್ಚಿಸುತ್ತಿದ್ದೇವೆ. ಕೆಲವು ಬಾರಿ ತಪಾಸಣೆ ಕಾರ್ಯಾಚರಣೆಯಲ್ಲಿ ಹಿರಿಯ ಅಧಿಕಾರಿಗಳೂ ತೊಡಗಿಸಿಕೊಳ್ಳುತ್ತಿದ್ದಾರೆ’ ಎಂದು ನೈಋತ್ಯ ರೈಲ್ವೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.