ADVERTISEMENT

ಓಣಂ ಹಬ್ಬಕ್ಕೆ ಪ್ರಯಾಣಿಸುವವರಿಗೆ ಕೊಚುವೇಲಿ–ಬೆಂಗಳೂರು ನಡುವೆ ವಿಶೇಷ ರೈಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಆಗಸ್ಟ್ 2023, 11:56 IST
Last Updated 3 ಆಗಸ್ಟ್ 2023, 11:56 IST
ಭಾರತೀಯ ರೈಲ್ವೆ
ಭಾರತೀಯ ರೈಲ್ವೆ   ಪ್ರಜಾವಾಣಿ ಫೈಲ್‌ ಚಿತ್ರ

ಬೆಂಗಳೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತೆರವುಗೊಳಿಸಲು ಹಾಗೂ ಓಣಂ ಹಬ್ಬದ ಪ್ರಯುಕ್ತ ಕೊಚುವೇಲಿ ಹಾಗೂ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ವಿಶೇಷ (06083/ 06084) ರೈಲುಗಳ ಸಂಚಾರಕ್ಕೆ ದಕ್ಷಿಣ ರೈಲ್ವೆ ವಲಯ ನಿರ್ಧರಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ನೈರುತ್ಯ ರೈಲ್ವೆ, ‘ರೈಲು ಸಂಖ್ಯೆ 06083 (ಕೊಚುವೇಲಿ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು) ಸಾಪ್ತಾಹಿಕ ಓಣಂ ವಿಶೇಷ ಎಕ್ಸ್‌ಪ್ರೆಸ್ ರೈಲು ಆಗಸ್ಟ್‌ 22, 29 ಮತ್ತು ಸೆ. 5ರಂದು ಪ್ರತಿ ಮಂಗಳವಾರ ಸಂಜೆ 6:05 ಕ್ಕೆ ಕೊಚುವೇಲಿಯಿಂದ ಹೊರಟು ಮರುದಿನ ಬೆಳಿಗ್ಗೆ 10:55 ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣ ತಲುಪಲಿದೆ.

ಈ ಮಾರ್ಗದಲ್ಲಿ ಕೊಲ್ಲಂ, ಕಾಯಂಕುಲಂ, ಮಾವೇಲಿಕರ, ಚೆಂಗನ್ನೂರ್, ತಿರುವಳ್ಳ, ಚೆಂಗನಸೇರಿ, ಕೊಟ್ಟಾಯಂ, ಎರ್ನಾಕುಲಂ ಟೌನ್, ಅಲುವಾ, ತ್ರಿಶೂರ್, ಪಾಲಕ್ಕಾಡ್, ಪೊದನೂರು, ತಿರುಪ್ಪೂರ್, ಈರೋಡ್, ಸೇಲಂ, ತಿರುಪತ್ತೂರ್, ಬಂಗಾರಪೇಟೆ, ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ADVERTISEMENT

ರೈಲು ಸಂಖ್ಯೆ 06084 (ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ಕೊಚುವೇಲಿ ಓಣಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು) ಆಗಸ್ಟ್‌ 23, 30 ಮತ್ತು ಸೆ. 6ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಿಂದ ಮಧ್ಯಾಹ್ನ 12:45 ಕ್ಕೆ ಹೊರಟು, ಮರುದಿನ ಬೆಳಿಗ್ಗೆ 6 ಕ್ಕೆ ಕೊಚುವೇಲಿ ನಿಲ್ದಾಣವನ್ನು ತಲುಪಲಿದೆ.

ಈ ವಿಶೇಷ ರೈಲುಗಳು 20 ಬೋಗಿಗಳ ಸಂಯೋಜನೆ ಹೊಂದಿರಲಿದೆ. 16-ಎಸಿ 3 ಟೈಯರ್‌ ಗರೀಬ್ ರಥ ಬೋಗಿಗಳು, 2-ದ್ವಿತೀಯ ದರ್ಜೆಯ ಸ್ಲೀಪರ್ ಬೋಗಿಗಳು ಮತ್ತು 2-ಜನರೇಟರ್ ಕಾರ್‌ನೊಂದಿಗೆ ಲಗೇಜ್ ಕಮ್ ಬ್ರೇಕ್-ವ್ಯಾನ್ ಇರಲಿವೆ. ಈ ವಿಶೇಷ ರೈಲಿನ ದರವು 1.3 ರಷ್ಟು ಹೆಚ್ಚು ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.