ADVERTISEMENT

ದ್ವೇಷ ಭಾಷಣ: ಎಸ್‌ಪಿ ನಾಯಕ ಆಜಂ ಖಾನ್‌ಗೆ ಎರಡು ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2023, 15:20 IST
Last Updated 15 ಜುಲೈ 2023, 15:20 IST
ಆಜಂ ಖಾನ್‌
ಆಜಂ ಖಾನ್‌   

ಲಖನೌ: ದ್ವೇಷ ಭಾಷಣ ಪ್ರಕರಣವೊಂದರಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಹಿರಿಯ ನಾಯಕ, ಪ್ರಧಾನ ಕಾರ್ಯದರ್ಶಿ ಆಜಂ ಖಾನ್‌ ಅವರಿಗೆ ಉತ್ತರ ಪ್ರದೇಶದ ರಾಂಪುರ ಪಟ್ಟಣದ ನ್ಯಾಯಾಲಯವೊಂದು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

2019ರಲ್ಲಿ ರಾಂಪುರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುವ ವೇಳೆ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ರಾಂಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಆಜಂ ಅವರು ಭಾಷಣದ ಮೂಲಕ ಕೋಮುದ್ವೇಷ ಬಿತ್ತಲು ಪ್ರಯತ್ನಿಸಿದ್ದಾರೆ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ಸರ್ಕಾರದ ಪರ ವಕೀಲರು ಆಪಾದನೆ ಮಾಡಿದ್ದರು.

ಬಳಿಕ, ಶೆಹ್ಜಾದ್‌ ನಗರ ಪೊಲೀಸ್‌ ಠಾಣೆಯಲ್ಲಿ ಆಜಂ ಖಾನ್‌ ವಿರುದ್ಧ ದೂರು ದಾಖಲಿಸಲಾಗಿತ್ತು.

ADVERTISEMENT

ಈ ಸಂಬಂಧ ತೀರ್ಪು ನೀಡಿರುವ ಜನಪ್ರತಿನಿಧಿಗಳ ನ್ಯಾಯಾಲಯ, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 505(1)(ಬಿ) (ಸಾರ್ವಜನಿಕರಲ್ಲಿ ಭಯ ಮೂಡಿಸುವ ಉದ್ದೇಶದಿಂದ ನಡೆಸಲಾಗಿರುವ ಕೃತ್ಯ) ಅಡಿ ಆಜಂ ಖಾನ್‌ ಅವರು ದೋಷಿ ಎಂದು ಘೋಷಿಸಿದೆ.

ಈ ಮೊದಲೂ, ದ್ವೇಷ ಭಾಷಣದ ಮತ್ತೊಂದು ಪ್ರಕರಣದಲ್ಲಿ ಆಜಂ ಖಾನ್‌ ದೋಷಿ ಎಂದು ಘೋಷಿಸಿದ್ದ ನ್ಯಾಯಾಲಯವೊಂದು ಅವರಿಗೆ 3 ವರ್ಷಗಳ ಸಜೆ ವಿಧಿಸಿತ್ತು. ಇದಾದ ಬಳಿಕ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.