ADVERTISEMENT

ಬಾಹ್ಯಾಕಾಶ; ಪಶ್ಚಿಮ ಘಟ್ಟ; ಶಿಕ್ಷಣ ನೀತಿ: ಡಾ.ಕಸ್ತೂರಿರಂಗನ್ ಸಾಧನೆ ಹಲವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಏಪ್ರಿಲ್ 2025, 10:34 IST
Last Updated 25 ಏಪ್ರಿಲ್ 2025, 10:34 IST
<div class="paragraphs"><p>ಕಸ್ತೂರಿ ರಂಗನ್</p></div>

ಕಸ್ತೂರಿ ರಂಗನ್

   

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) 5ನೇ ಅಧ್ಯಕ್ಷರಾಗಿದ್ದ (1994ರಿಂದ 2003) ಡಾ. ಕೆ. ಕಸ್ತೂರಿರಂಗನ್‌ ಅವರು ಬಾಹ್ಯಾಕಾಶ ಕ್ಷೇತ್ರಕ್ಕಷ್ಟೇ ಸೀಮಿತವಾಗದೆ, ಪರಿಸರ, ಶಿಕ್ಷಣ, ರಾಷ್ಟ್ರೀಯ ಯೋಜನೆ ಹೀಗೆ ಹಲವು ಆಯಾಮಗಳಲ್ಲಿ ಕೆಲಸ ಮಾಡಿದವರು.

ಬೆಂಗಳೂರಿನಲ್ಲಿ ಶುಕ್ರವಾರ ಬೆಳಿಗ್ಗೆ ನಿಧನರಾದ ಡಾ. ಕಸ್ತೂರಿರಂಗನ್‌ ಅವರು ಸುಮಾರು ಒಂಬತ್ತು ವರ್ಷಗಳ ಕಾಲ ಇಸ್ರೊ ಅಧ್ಯಕ್ಷರಾಗಿ ಹಲವು ಹೊಸ ಯೋಜನೆಗಳನ್ನು ಜಾರಿಗೆ ತಂದವರು. 

ADVERTISEMENT

ಭೂವೀಕ್ಷಣಾ ಉಪಗ್ರಹಗಳಾದ ಭಾಸ್ಕರ್‌–1 ಮತ್ತು 2, ಭಾರತದ ಮೊದಲ ದೂರಸಂವೇದಿ ಉಪಗ್ರಹ ಐಆರ್‌ಎಸ್–1ಎ, ಎಬಿ ಇನ್‌ಸ್ಯಾಟ್‌–2 ಉಪಗ್ರಹಗಳ ಉಡ್ಡಯನ ಇವರ ಅವಧಿಯಲ್ಲಿ ನಡೆಯಿತು. ವಿಶ್ವದ ಸರ್ವಶ್ರೇಷ್ಠ ನಾಗರಿಕ ಉಪಗ್ರಹಗಳಾದ ಐಆರ್‌ಎಸ್‌ 1ಸಿ ಮತ್ತು 1ಡಿ ವಿನ್ಯಾಸ, ಅಭಿವೃದ್ಧಿ ಮತ್ತು ಉಡ್ಡಯನಗಳೂ ನಡೆದವು. ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ಉಡ್ಡಯನ ವಾಹನಗಳ ಬಳಕೆಯು ಇವರ ನೇತೃತ್ವದಲ್ಲೇ ಆರಂಭಗೊಂಡು, ಇಸ್ರೊದ ಬಾಹ್ಯಾಕಾಶ ಸಂಶೋಧನೆಯ ಪ್ರಗತಿಯ ವೇಗ ಹೆಚ್ಚಿಸಿತ್ತು. ಜತೆಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತವೂ ನಿಲ್ಲುವಂತೆ ಮಾಡುವಲ್ಲಿ ಕಸ್ತೂರಿರಂಗನ್ ಪಾತ್ರ ಮಹತ್ವದ್ದಾಗಿತ್ತು.

ಕಸ್ತೂರಿರಂಗನ್ ಅವರ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ರಾಜ್ಯ ಸಭೆಗೆ ನಾಮನಿರ್ದೇಶನ ಮಾಡಿತು. ಜತೆಗೆ ಯುಪಿಎ ಸರ್ಕಾರದ ಅವಧಿಯಲ್ಲಿ ಅವರು ಯೋಜನಾ ಆಯೋಗದ ಸದಸ್ಯರಾಗಿದ್ದರು. ಎನ್‌ಡಿಎ ಅವಧಿಯಲ್ಲಿ 2020ರಲ್ಲಿ ನೂತನ ಶಿಕ್ಷಣ ನೀತಿಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು. 12 ಸದಸ್ಯರ ಈ ಸಮಿತಿಯು ಹೊಸ ರಾಷ್ಟ್ರೀಯ ಶಿಕ್ಷಣದ ಪಠ್ಯಕ್ರಮದ ಚೌಕಟ್ಟನ್ನು ಸಿದ್ಧಪಡಿಸಿತು.

2013ರಲ್ಲಿ ಪಶ್ಚಿಮ ಘಟ್ಟ ಕುರಿತು ಡಾ. ಕಸ್ತೂರಿ ರಂಗನ್ ನೀಡಿದ ವರದಿ ವ್ಯಾಪಕ ಚರ್ಚೆಗೆ ಕಾರಣವಾಯಿತು.

ಗುಜರಾತ್‌ನ ತಪತಿ ನದಿ ಮೂಲದಿಂದ ಹಿಡಿದು, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡಿನ 1,64,280 ಚದರ ಕಿಲೋ ಮೀಟರ್‌ನಷ್ಟು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕರ್ನಾಟಕದ ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಕೊಡಗು, ಚಾಮರಾನಗರದ ಭೂಭಾಗ ಪಶ್ಚಿಮ ಘಟ್ಟದ ವ್ಯಾಪ್ತಿಗೆ ಬರುತ್ತವೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳು ಗಣಿಗಾರಿಕೆ, ಕೈಗಾರಿಕೆಗಳು, ಜಲ ವಿದ್ಯುತ್ ಯೋಜನೆ, ಪವನ ವಿದ್ಯುತ್ ಯೋಜನೆ ಸೇರಿದಂತೆ ಎಲ್ಲಾ ರೀತಿಯ ಕಾರ್ಯಗಳನ್ನು ಸ್ಥಗಿತಗೊಳಿಸಬೇಕೆಂದು ಇವರ ವರದಿ ಶಿಫಾರಸು ಮಾಡಿತ್ತು. ‌

ಪರಸರವಾದಿಗಳು ಇವರ ವರದಿಯನ್ನು ಸ್ವಾಗತಿಸಿದರೆ, ಆದಿವಾಸಿಗಳು, ಅರಣ್ಯವಾಸಿಗಳು ಮತ್ತು ಮಲೆನಾಡಿನ ಜನರನ್ನು ಒಕ್ಕಲೆಬ್ಬಿಸುವ ವರದಿ ಎಂದು ಹಲವರು ವಿರೋಧಿಸಿದರು. 

ಬಾಂಬೆ ವಿಶ್ವವಿದ್ಯಾಲಯದಿಂದ ಭೌತವಿಜ್ಞಾನದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಕಸ್ತೂರಿರಂಗನ್ ಅವರು, ಖಗೋಳ ವಿಜ್ಞಾನ ವಿಷಯದಲ್ಲಿ ಪಿಎಚ್‌.ಡಿ.ಯನ್ನು ಅಹಮದಾಬಾದ್‌ನ ಫಿಸಿಕಲ್ ರಿಸರ್ಚ್‌ ಲ್ಯಾಬೊರೇಟರಿಯಿಂದ ಪಡೆದಿದ್ದಾರೆ. ‌‌ವಿವಿಧ ಕ್ಷೇತ್ರಗಳಿಗೆ ತಮ್ಮ ವಿಶಿಷ್ಟ ಕೊಡುಗೆ ನೀಡಿರುವ ಇವರಿಗೆ ಪದ್ಮಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ. 

ಡಾ. ಕೆ. ಕಸ್ತೂರಿರಂಗನ್ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

‘ಭಾರತದ ವೈಜ್ಞಾನಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಕಸ್ತೂರಿ ರಂಗನ್ ಅವರು ಬಹು ಎತ್ತರದಲ್ಲಿ ನಿಲ್ಲುತ್ತಾರೆ. ಅವರ ದೂರದೃಷ್ಟಿ, ನಾಯಕತ್ವ ಮತ್ತು ನಿಸ್ವಾರ್ಥ ಸೇವೆಯನ್ನು ದೇಶ ಸದಾ ನೆನೆಯಲಿದೆ’ ಎಂದು ಮೋದಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.