ADVERTISEMENT

ಊದಿಕೊಂಡ ಮುಖ,ಬೆನ್ನುನೋವು, ನಿಧಾನ ಹೃದಯ ಬಡಿತ: ಗಗನಯಾನದ ಅನುಭವ ವಿವರಿಸಿದ ಶುಕ್ಲಾ

ಪಿಟಿಐ
Published 19 ಸೆಪ್ಟೆಂಬರ್ 2025, 12:51 IST
Last Updated 19 ಸೆಪ್ಟೆಂಬರ್ 2025, 12:51 IST
<div class="paragraphs"><p>ಶುಭಾಂಶು ಶುಕ್ಲಾ</p></div>

ಶುಭಾಂಶು ಶುಕ್ಲಾ

   

ಪಿಟಿಐ ಚಿತ್ರ

ನವದೆಹಲಿ: ಊದಿಕೊಂಡ ಮುಖ, ನಿಧಾನವಾಗಿರುವ ಹೃದಯಬಡಿತ, ಬಿಡದೆ ಕಾಡುವ ಬೆನ್ನು ನೋವು, ರುಚಿ ಕಳೆದುಕೊಳ್ಳುವ ನಾಲಿಗೆ.. ಗುರುತ್ವಾಕರ್ಷಣಾ ಶಕ್ತಿ ಇಲ್ಲದಿರುವ ಬಾಹ್ಯಾಕಾಶ ಯಾನದ ನಿಜವಾದ ಅನುಭವವನ್ನು ಗಗನಯಾತ್ರಿ ಶುಭಾಂಶು ಶುಕ್ಲಾ ಹಂಚಿಕೊಂಡಿದ್ದಾರೆ.

ADVERTISEMENT

Fಫಿಕ್ಕಿ ಸಿಎಲ್‌ಒ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ತೆರಳಿದ ವೇಳೆ ಎದುರಿಸಿದ ಸಮಸ್ಯೆಗಳ ಕುರಿತು ವಿವರಿಸಿದ್ದಾರೆ.

‘ಐಎಸ್‌ಎಸ್‌ನಲ್ಲಿ ಕಳೆದ ದಿನಗಳು ನಮ್ಮ ಪಾಲಿಗೆ ತಾಳ್ಮೆಗೆ ಸಂಬಂಧಿಸಿದ ಕಠಿಣ ಪರೀಕ್ಷೆ ಒಡ್ಡಿದ್ದವು. ಕಷ್ಟಗಳನ್ನು ಎದುರಿಸಿ ಪುಟಿದೇಳುವುದು, ತಂಡವಾಗಿ ಕಾರ್ಯ ನಿರ್ವಹಣೆ ಹಾಗೂ ಸತತ ಪ್ರಯತ್ನದಂತಹ ಪಾಠಗಳನ್ನು ಕಲಿತೆವು’ ಎಂದು ಶುಕ್ಲಾ ಹೇಳಿದ್ದಾರೆ.

ಆರಂಭದಲ್ಲಿ ಅಂತರಿಕ್ಷ ಕಾರ್ಯಕ್ರಮಗಳು ರೋಮಾಂಚನಕಾರಿ ಎನಿಸುತ್ತವೆ. ಇದು ನಿಜವೂ ಕೂಡ. ಆದರೆ, ಐಎಸ್‌ಎಸ್‌ನಂತಹ ಕಡಿಮೆ ಗುರುತ್ವಾಕರ್ಷಣೆ ಇರುವ ಪರಿಸರವನ್ನು ಪ್ರವೇಶಿಸಿದಾಗ, ನಮ್ಮ ದೇಹ ತನ್ನ ಪ್ರತಿರೋಧ ಹೊರಹಾಕುತ್ತದೆ. ಅಂತಹ ಪರಿಸರವನ್ನು ದೇಹ ಮೊದಲು ಕಂಡಿರುವುದಿಲ್ಲ ಎಂಬುದೇ ಇದಕ್ಕೆ ಕಾರಣ’ ಎಂದು ವಿವರಿಸಿದ್ದಾರೆ.

‘ರಕ್ತದ ಪರಿಚಲನೆಯಲ್ಲಿ ವ್ಯತ್ಯಾಸವಾಗುತ್ತದೆ. ತಲೆ ಗಾಳಿತುಂಬಿಕೊಂಡ ರೀತಿ ಉಬ್ಬುತ್ತದೆ, ಹೃದಯದ ಬಡಿತ ನಿಧಾನವಾಗುತ್ತದೆ. ಬೆನ್ನುಹುರಿ ಹಿಗ್ಗಿದಂತಾಗುವ ಕಾರಣ ಬೆನ್ನನೋವು ಬಾಧಿಸುತ್ತದೆ’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡುವ ಕೆಲವೇ ಕ್ಷಣಗಳ ಮೊದಲು ವಾಕರಿಕೆ ಮತ್ತು ತಲೆನೋವನ್ನು ಅನುಭವಿಸಿದ್ದೆ.  ಅಲ್ಲಿ ನೀವು ಔಷಧವನ್ನೂ ತೆಗೆದುಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ಅದು ತೂಕಡಿಸುವಿಕೆ ಉಂಟಾಗುವಂತೆ ಮಾಡಬಹುದು. ಹೀಗಾಗಿ ಅನಾರೋಗ್ಯದಂತಹ ಪರಿಸ್ಥಿತಿ ಎದುರಾದರೂ ಕೆಲಸ ಮಾಡಲೇಬೇಕು. ಇಂತಹ ಸಂದರ್ಭದಲ್ಲಿ ಸಹಾಯ ಮಾಡುವವರು ತಂಡದವರು. ಹೀಗಾಗಿ ನೀವು ಒಬ್ಬರೇ ಬಾಹ್ಯಾಕಾಶಕ್ಕೆ ಹೋಗಲು ಸಾಧ್ಯವಿಲ್ಲ. ತಂಡದ ನೆರವಿನೊಂದಿಗೆ ಸಾಗಬೇಕಾಗುತ್ತದೆ’ ಎಂದು ಶುಕ್ಲಾ ಅನುಭವದ ಬುತ್ತಿ ಬಿಚ್ಚಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.