ADVERTISEMENT

HC ನ್ಯಾಯಮೂರ್ತಿ ವರ್ಮಾ ವಿರುದ್ಧ ತನಿಖೆ: ಸಮಿತಿ ರಚನೆ; ಸ್ಪೀಕರ್‌ ಶೀಘ್ರ ಘೋಷಣೆ?

ನಿವಾಸದಲ್ಲಿ ನಗದು ಪತ್ತೆ ಆರೋಪ: ಹೈಕೋರ್ಟ್‌ ನ್ಯಾಯಮೂರ್ತಿ ವರ್ಮಾ ವಿರುದ್ಧ ತನಿಖೆ

ಪಿಟಿಐ
Published 24 ಜುಲೈ 2025, 15:36 IST
Last Updated 24 ಜುಲೈ 2025, 15:36 IST
ಓಂ ಬಿರ್ಲಾ
ಓಂ ಬಿರ್ಲಾ   

ನವದೆಹಲಿ: ಅಲಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ ವರ್ಮಾ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುವುದಕ್ಕಾಗಿ ಸಮಿತಿಯೊಂದನ್ನು ರಚಿಸುವ ಕುರಿತು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಗುರುವಾರ ಹೇಳಿವೆ.

ಸಂಸತ್‌ನ ಉಭಯ ಸದನಗಳಲ್ಲಿ ದಿನವಿಡೀ ಹಿರಿಯ ಸಚಿವರೊಂದಿಗೆ ಸರಣಿ ಸಭೆಗಳು ನಡೆದಿದ್ದು, ಸಮಿತಿ ರಚಿಸುವ ಕುರಿತು ಶೀಘ್ರವೇ ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎಂದು ತಿಳಿಸಿವೆ.

ನ್ಯಾಯಮೂರ್ತಿ ಅವರು, ತಮ್ಮ ನಿವಾಸದಲ್ಲಿ ನಗದು ಪತ್ತೆಯಾಗಿರುವ ಕುರಿತು ಆರೋಪ ಎದುರಿಸುತ್ತಿದ್ದಾರೆ. ಅವರ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುವುದಕ್ಕಾಗಿ ಸಮಿತಿ ರಚಿಸುವಂತೆ ಕೋರಿ 152 ಸಂಸದರು ಬಿರ್ಲಾ ಅವರಿಗೆ ಜುಲೈ 21ರಂದು ನೋಟಿಸ್‌ ಸಲ್ಲಿಸಿದ್ದರು. ಇದರ ಬೆನ್ನಲ್ಲೇ, ಮೂವರು ಸದಸ್ಯರಿರುವ ಸಮಿತಿ ರಚನೆ ಸಂಬಂಧ ವ್ಯಾಪಕ ಸಮಾಲೋಚನೆಗಳು ನಡೆದಿವೆ ಎನ್ನಲಾಗಿದೆ.

ADVERTISEMENT

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಥವಾ ನ್ಯಾಯಮೂರ್ತಿ, ಹೈಕೋರ್ಟ್‌ವೊಂದರ ಮುಖ್ಯ ನ್ಯಾಯಮೂರ್ತಿ ಹಾಗೂ ಕಾನೂನು ತಜ್ಞರೊಬ್ಬರನ್ನು ಈ ಸಮಿತಿ ಒಳಗೊಂಡಿರಲಿದೆ ಎಂದು ಮೂಲಗಳು ಹೇಳಿವೆ.

ಜಗದೀಪ್‌ ಧನಕರ್‌ ಅವರು ಉಪ ರಾಷ್ಟ್ರಪತಿ ಆಗಿದ್ದ ವೇಳೆ, ರಾಜ್ಯಸಭೆಯ 63 ಸದಸ್ಯರು ಸಹ ಜುಲೈ 21ರಂದೇ ಇದೇ ವಿಚಾರವಾಗಿ ನೋಟಿಸ್‌ ನೀಡಿದ್ದರು. 

ನ್ಯಾಯಮೂರ್ತಿಗಳ(ತನಿಖೆ) ಕಾಯ್ದೆಯಡಿ, ಮೂವರು ಸದಸ್ಯರ ಸಮಿತಿ ತನಿಖೆ ನಡೆಸಲಿದೆ. ‘ಆರೋಪ ಹೊತ್ತ ನ್ಯಾಯಮೂರ್ತಿಗಳನ್ನು ಯಾವ ಆಧಾರದ ಮೇಲೆ ಹುದ್ದೆಯಿಂದ ಪದಚ್ಯುತಗೊಳಿಸಬೇಕು’ ಎಂಬ ಬಗ್ಗೆ ಸಮಿತಿಯು ಶಿಫಾರಸು ಮಾಡಲಿದೆ.

ಸಿಜೆಐಗೆ ಪತ್ರ: ಸಮಿತಿ ರಚನೆಗೆ ಸಂಬಂಧಿಸಿ, ಲೋಕಸಭಾ ಸ್ಪೀಕರ್ ಬಿರ್ಲಾ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದು, ಇಬ್ಬರು ನ್ಯಾಯಮೂರ್ತಿಗಳ ಹೆಸರು ಶಿಫಾರಸು ಮಾಡುವಂತೆ ಕೋರಲಿದ್ದಾರೆ. ಕಾನೂನು ವಿದ್ವಾಂಸರೊಬ್ಬರನ್ನು ಆಯ್ಕೆ ಮಾಡುವುದು ಬಿರ್ಲಾ ಅವರ ವಿವೇಚನಾಧಿಕಾರವಾಗಿದೆ.

ಇನ್ನೊಂದೆಡೆ, ನ್ಯಾಯಮೂರ್ತಿ ವರ್ಮಾ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುವುದಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಸರಣಿ ಸಭೆಗಳಲ್ಲಿ ಸ್ಪೀಕರ್ ಓಂ ಬಿರ್ಲಾ, ಗೃಹ ಸಚಿವ ಅಮಿತ್‌ ಶಾ, ರಾಜ್ಯಸಭೆಯಲ್ಲಿ ಸಭಾನಾಯಕ ಜೆ.ಪಿ.ನಡ್ಡಾ, ರಾಜ್ಯಸಭೆಯ ಹಂಗಾಮಿ ಸಭಾಪತಿ ಹರಿವಂಶ್‌ ಪಾಲ್ಗೊಂಡಿದ್ದರು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.