
ಕೊಲಂಬೊ: ‘ದಿತ್ವಾ’ ಚಂಡಮಾರುತದಿಂದಾಗಿ ತತ್ತರಿಸಿರುವ ಶ್ರೀಲಂಕಾದಲ್ಲಿ ಸಿಲುಕಿದ್ದ 104 ಭಾರತೀಯರನ್ನು ಶನಿವಾರ ಕರೆತರಲಾಗಿದೆ. ಈ ಮೂಲಕ ಅಪಾಯದಲ್ಲಿದ್ದ ಎಲ್ಲ ಭಾರತೀಯರು ಸ್ವದೇಶಕ್ಕೆ ತಲುಪಿದಂತಾಗಿದೆ.
‘ಸಾಗರಬಂಧು ಹೆಸರಿನ ಕಾರ್ಯಾಚರಣೆಯಲ್ಲಿ 104 ಭಾರತೀಯರನ್ನು ವಾಯಪಡೆಯ ಯುದ್ಧವಿಮಾನದ ಮೂಲಕ ಕೊಲಂಬೊ ಬಂಡಾರನಾಯಿಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಿರುವನಂತಪುರಕ್ಕೆ ಕರೆತರಲಾಯಿತು’ ಎಂದು ಭಾರತದ ಹೈಕಮಿಷನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
ಶ್ರೀಲಂಕಾದ ರಕ್ಷಣ ಕಾರ್ಯಕ್ಕೆ ಮತ್ತಷ್ಟು ನೆರವು ನೀಡುತ್ತಿರುವ ಭಾರತ, ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ಭಾರತೀಯ ವಾಯುಪಡೆಯ ಚೇತಕ್ ಯುದ್ಧವಿಮಾನವು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದೆ. ಭೂಕುಸಿತ ಮತ್ತು ಪ್ರವಾಹದಿಂದ ರಸ್ತೆ ಸಂಪರ್ಕ ಕಡಿತಗೊಂಡಿರುವ ಗುಡ್ಡಪ್ರದೇಶ ಕೊಟ್‌ಮಲೆಯಲ್ಲಿಯೂ ಕಾರ್ಯಾಚರಣೆ ನಡೆಸುತ್ತಿದೆ
ಎನ್‌ಡಿಆರ್‌ಎಫ್ ಭಾನುವಾರ ಕೊಲಂಬೊಕ್ಕೆ ತಲುಪಿದ್ದು, ಕೋಚಿಕಡೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಹೆಲಿಕಾಪ್ಟರ್ ಪತನ:
ವೆನ್ನಪ್ಪುವ ಕರಾವಳಿಯಲ್ಲಿ ಪರಿಹಾರ ಸಾಮಗ್ರಿ ತಲುಪಿಸುತ್ತಿದ್ದ ವೇಳೆ ಹೆಲಿಕಾಪ್ಟರ್‌ವೊಂದು ಪತನಗೊಂಡಿದ್ದು, ಪೈಲಟ್ ಮೃತಪಟ್ಟಿದ್ದಾರೆ. ಐವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಶ್ರೀಲಂಕಾ ವಾಯಪಡೆ ದೃಢಪಡಿಸಿದೆ.
ರಕ್ಷಣಾ ಕಾರ್ಯಚರಣೆ ನಡೆಸುತ್ತಿದ್ದ ನೌಕಾಪಡೆಯ ಐವರು ನಾವಿಕರ ಮೃತದೇಹ ಪತ್ತೆಯಾಗಿದೆ ಎಂದು ಶ್ರೀಲಂಕಾ ನೌಕಾಪಡೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.