ತಿರುವನಂತಪುರ: ಕೋವಿಡ್ ಲಸಿಕೆಯ ಉಚಿತ ವಿತರಣೆ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗವು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ಸೋಮವಾರ ವಿವರಣೆ ಕೇಳಿದೆ.
‘ಪಿಣರಾಯಿ ಅವರಿಗೆ ಪತ್ರ ರವಾನಿಸಿರುವ ಆಯೋಗವು, ತಾವು ನೀಡಿರುವ ಹೇಳಿಕೆ ಕುರಿತು ವಿವರಣೆ ನೀಡುವಂತೆ ಸೂಚಿಸಿದೆ’ ಎಂದು ಮೂಲಗಳು ತಿಳಿಸಿವೆ.
ಕಣ್ಣೂರಿನಲ್ಲಿ ಶನಿವಾರ ಮಾತನಾಡಿದ್ದ ಪಿಣರಾಯಿ, ಎಲ್ಲರಿಗೂ ಕೋವಿಡ್ ಲಸಿಕೆಯನ್ನು ಉಚಿತವಾಗಿ ಕೊಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದರು. ಸ್ಥಳೀಯ ಸಂಸ್ಥೆಗಳ ಕೊನೆಯ ಹಂತದ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಪಿಣರಾಯಿ ಈ ರೀತಿ ಹೇಳಿಕೆ ನೀಡಿದ್ದಾರೆ. ಆ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಹಾಗೂ ಬಿಜೆಪಿ, ಆಯೋಗಕ್ಕೆ ಭಾನುವಾರ ದೂರು ನೀಡಿದ್ದವು.
ಕಣ್ಣೂರಿನಲ್ಲಿ ಸೋಮವಾರ ಮತ ಚಲಾಯಿಸಿದ ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ಪಿಣರಾಯಿ ‘ನಾವು ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದೇವೆ. ಲಸಿಕೆಯು ಚಿಕಿತ್ಸೆಯ ಭಾಗವಾಗಿದ್ದು, ಅದಕ್ಕೆ ತಗಲುವ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದೇನೆ. ನಾನು ಯಾವ ನೀತಿ ಸಂಹಿತೆಯನ್ನೂ ಉಲ್ಲಂಘನೆ ಮಾಡಿಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.