ADVERTISEMENT

ಅಂತಿಮ ಹಂತದಲ್ಲಿ ‘ಏಕತೆ ಮೂರ್ತಿ’ ನಿರ್ಮಾಣ ಕಾರ್ಯ

ಅಕ್ಟೋಬರ್‌ 31ರಂದು ಪ್ರಧಾನಿ ನರೇಂದ್ರಮೋದಿಯಿಂದ ಲೋಕಾರ್ಪಣೆ

ಪಿಟಿಐ
Published 16 ಅಕ್ಟೋಬರ್ 2018, 16:16 IST
Last Updated 16 ಅಕ್ಟೋಬರ್ 2018, 16:16 IST
ಸರ್ದಾರ್‌ ಪಟೇಲ್‌
ಸರ್ದಾರ್‌ ಪಟೇಲ್‌   

ಕೆವಾಡಿಯಾ, ಗುಜರಾತ್‌: ಜಗತ್ತಿನ ಅತ್ಯಂತ ಮೂರ್ತಿ ಎಂದು ಖ್ಯಾತಿ ಪಡೆದಿರುವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ‘ಏಕತೆ ಮೂರ್ತಿ’ಯ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಅಂತಿಮ ಹಂತದ ಕಾರ್ಯಗಳು ಭರದಿಂದ ಸಾಗಿದೆ. ಪಟೇಲ್‌ ಅವರ ಜನ್ಮದಿನವಾದ ಅಕ್ಟೋಬರ್‌ 31ರಂದು ಈ ಮೂರ್ತಿಯನ್ನು ಪ್ರಧಾನಿ ನರೇಂದ್ರಮೋದಿ ಅವರುಲೋಕಾರ್ಪಣೆ ಮಾಡಲಿದ್ದಾರೆ.

ನರ್ಮದಾ ನದಿಯ ‘ಸಾದುಬೆಟ್‌’ ದ್ವೀಪದಲ್ಲಿ ಈ ಮೂರ್ತಿ ನಿರ್ಮಾಣಗೊಳ್ಳುತ್ತಿದ್ದು, 250 ಎಂಜಿನಿಯರ್‌ಗಳು ಹಾಗೂ 3,400 ನೌಕರರು ಹಗಳಿರುಳು ಕೆಲಸ ಮಾಡುತ್ತಿದ್ದಾರೆ. ಈ ಮೂರ್ತಿ 182 ಮೀಟರ್‌ ಎತ್ತರವಿದ್ದು, ₹2,389 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ.

‘ಈ ಮೂರ್ತಿ ಪೂರ್ತಿಗೊಂಡರೆ, ವಿಶ್ವದಲ್ಲೇ ಅತ್ಯಂತ ಎತ್ತರದ ಮೂರ್ತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ನರ್ಮದಾ ಅಣೆಕಟ್ಟಿನ ಕೆಳಗಿರುವ ಕಿರುದ್ವೀಪದ 3.2 ಕಿ.ಮೀ ಜಾಗದಲ್ಲಿ ಮೂರ್ತಿ ಹಾಗೂ ಮ್ಯೂಸಿಯಂ ಒಳಗೊಂಡಿದೆ’ ಎಂದು ಸರ್ದಾರ್‌ ಸರೋವರ್‌ ನರ್ಮದಾ ನಿಗಮ್‌ ಲಿಮಿಟೆಡ್‌ನ (ಎಸ್‌ಎಸ್‌ಎನ್‌ಎನ್‌ಎಲ್) ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್‌.ಎಸ್‌.ರಾಥೋಡ್‌ ಅವರು ತಿಳಿಸಿದರು.

ADVERTISEMENT

‘ಮೂರ್ತಿಯ ನಿರ್ಮಾಣ ಕಾರ್ಯ ಅಕ್ಟೋಬರ್‌ 31ಕ್ಕೂ ಮುನ್ನವೇ ಪೂರ್ತಿಗೊಳ್ಳಲಿದೆ’ ಎಂದು ಅವರು ತಿಳಿಸಿದರು.

ಅತ್ಯಂತ ವೇಗದಲ್ಲಿ ಅಂತಿಮ ಹಂತದ ಕಾರ್ಯಗಳು ನಡೆಯುತ್ತಿದ್ದು, ಸರ್ದಾರ್‌ ಪಟೇಲ್‌ ಅವರಿಗೆ ಸೇರಿದ ಮ್ಯೂಸಿಯಂ, ಎಲಿವೇಟರ್‌, ವೀಕ್ಷಣಾ ಗ್ಯಾಲರಿ ಒಳಗೊಂಡಿದೆ. ಸ್ಮಾರಕ ಉದ್ಯಾನದ ನಿರ್ಮಾಣ ಕಾರ್ಯವು ಅಂತಿಮ ಹಂತದಲ್ಲಿದೆ.

ಮೂರ್ತಿಯ ಕೆಳಹಂತಕ್ಕೆ ತಲುಪುವ 306 ಮೀಟರ್‌ ನಡಿಗೆಪಥಕ್ಕೆ ಮಾರ್ಬಲ್‌ ಅಳವಡಿಸುವ ಕೆಲಸ ನಡೆಯುತ್ತಿದೆ. ಇದಲ್ಲದೇ, ಎಸ್ಕಲೇಟರ್‌, ಸೆಲ್ಫೀ ಪಾಯಿಂಟ್‌, ಶಾಪಿಂಗ್‌ ಪಾಯಿಂಟ್‌ಗಳನ್ನು ಒಳಗೊಂಡಿರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

2013ರ ಅಕ್ಟೋಬರ್‌ 31ರಂದು ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ವೇಳೆ ಈ ಮೂರ್ತಿ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

2014ರ ಡಿಸೆಂಬರ್‌ 3ರಂದು ಎಲ್‌ಆ್ಯಂಡ್‌ ಟಿ ಕಂಪನಿಗೆ ನಿರ್ಮಾಣ ಕಾರ್ಯದ ಗುತ್ತಿಗೆ ನೀಡಲಾಗಿತ್ತು. 42 ತಿಂಗಳ ಒಳಗಾಗಿ ಈ ಕೆಲಸ ಮುಗಿಸಲು ಗಡುವು ನೀಡಲಾಗಿತ್ತು.

‘ಕೆಲವೊಂದು ವಿನ್ಯಾಸದಲ್ಲಿ ಒಂದಿಷ್ಟು ಮಾರ್ಪಾಡು ಮಾಡಿದ್ದರಿಂದ ಕೆಲವು ತಿಂಗಳುಗಡುವು ವಿಸ್ತರಿಸಲಾಯಿತು’ ಎಂದು ಎಸ್‌ಎಸ್‌ಎನ್ಎಲ್‌ನ ಸೂಪರಿಡಿಟೆಂಟ್‌ ಎಂಜಿನಿಯರ್‌ ಆರ್‌.ಕನುಗೊ ತಿಳಿಸಿದರು.

‘ಮೂರ್ತಿಯು ಪೂರ್ವಾಭಿಮುಖವಾಗಿದೆ, ಈ ಹಿಂದೆ ಯೋಜಿಸಿದಂತೆ, ಅಣೆಕಟ್ಟಿಗೆ ಅಭಿಮುಖವಾಗಿಲ್ಲ. ನೆರಳಿನ ಪ್ರತಿಬಿಂಬವನ್ನು ಪರಿಶೀಲಿಸಿ, ಮೂರ್ತಿಯ ದಿಕ್ಕನ್ನು ಅಂತಿಮಗೊಳಿಸಲಾಗಿತ್ತು, ಈ ಕಾರಣದಿಂದ ಮೂರ್ತಿಯುದಿನದ ಸಾಕಷ್ಟು ಸಮಯ ಪ್ರಕಾಶಮಾನವಾಗಿ ಹೊಳೆಯುತ್ತಿರುತ್ತದೆ’ ಎಂದು ರಾಥೋಡ್‌ ತಿಳಿಸಿದರು.

ತಳದಲ್ಲಿ ಮ್ಯಾಪಿಂಗ್‌ ಸೌಕರ್ಯವಿರಲಿದ್ದು, ಪಟೇಲ್‌ ಜೀವನಕ್ಕೆ ಸಂಬಂಧಿಸಿದ ಬೆಳಕು ಮತ್ತು ಧ್ವನಿಯ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ.

ಮೂರ್ತಿ ನಿರ್ಮಾಣಕ್ಕೆ 553 ಕಂಚಿನ ಹಾಳೆಗಳನ್ನು ಬಳಸಲಾಗಿತ್ತು, ಪ್ರತಿ ಹಾಳೆಯೂ 10ರಿಂದ 15 ಚಿಕ್ಕ ಹಾಳೆಗಳಿಂದ ನಿರ್ಮಿಸಲ್ಪಟ್ಟಿದೆ. ಇದನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿತ್ತು. ಈ ವಿಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ರಗಾಂಧಿ ಕೂಡ ತೀವ್ರ ಟೀಕೆ ಮಾಡಿದ್ದರು.

ವೀಕ್ಷಣಾ ಗ್ಯಾಲರಿ

ಸಮುದ್ರ ಮಟ್ಟದಿಂದ 193 ಮೀಟರ್‌ ಎತ್ತರದಲ್ಲಿ ವೀಕ್ಷಣಾ ಗ್ಯಾಲರಿ ನಿರ್ಮಾಣಗೊಳ್ಳುತ್ತಿದ್ದು, ಏಕಕಾಲಕ್ಕೆ 200 ಮಂದಿ ವೀಕ್ಷಿಸುವಷ್ಟು ಸ್ಥಳಾವಕಾಶ ಹೊಂದಿದೆ. ಇಲ್ಲಿಗೆ ಅತ್ಯಂತ ವೇಗವಾಗಿ ಕರೆದೊಯ್ಯಲು ಎರಡು ಹೈಸ್ಪೀಡ್‌ ಲಿಫ್ಟ್‌ ಕೂಡ ಅಳವಡಿಸಲಾಗಿದ್ದು, ಇಲ್ಲಿಂದ ನರ್ಮದಾ ಅಣೆಕಟ್ಟಿನ ದೃಶ್ಯಗಳನ್ನು ವೀಕ್ಷಿಸಬಹುದು.

‘ಹೂವಿನ ಕಣಿವೆ’

ಪ್ರತಿಮೆಗೆ ತಾಗಿರುವ ಬೆಟ್ಟದ 230 ಹೆಕ್ಟೇರ್‌ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಲಾಗುತ್ತಿದ್ದು, ‘ಹೂವಿನ ಕಣಿವೆ’ಯನ್ನು ಹೋಲಲಿದೆ. ಬುಡಕಟ್ಟು ಸಮುದಾಯ ಹೆಚ್ಚಾಗಿರುವ ಪ್ರದೇಶದಲ್ಲಿ 52 ಕೊಠಡಿಗಳನ್ನು ಒಳಗೊಂಡ ತ್ರಿಸ್ಟಾರ್‌ ಹೊಟೇಲ್‌, 250 ಟೆಂಟ್‌ಗಳನ್ನು ಒಳಗೊಂಡ ಟೆಂಟ್‌ ನಗರವೂ ನಿರ್ಮಾಣ ಕಾರ್ಯ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.