ADVERTISEMENT

EVM ಬಗ್ಗೆ ದಾರಿ ತಪ್ಪಿಸುವುದನ್ನು ನಿಲ್ಲಿಸಿ, ಜನಾದೇಶ ಒಪ್ಪಿಕೊಳ್ಳಿ: ಶಿಂದೆ

ಪಿಟಿಐ
Published 8 ಡಿಸೆಂಬರ್ 2024, 10:49 IST
Last Updated 8 ಡಿಸೆಂಬರ್ 2024, 10:49 IST
<div class="paragraphs"><p>&nbsp;ಏಕನಾಥ ಶಿಂದೆ</p></div>

 ಏಕನಾಥ ಶಿಂದೆ

   

ಮುಂಬೈ: ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷಗಳು ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ವಿಚಾರದಲ್ಲಿ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಆರೋಪಿಸಿದರು. ಅಲ್ಲದೆ, ವಿರೋಧ ಪಕ್ಷಗಳು ಜನರ ತೀರ್ಪನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ದೂರಿದರು.

‘ಮಹಾಯುತಿ ಮೈತ್ರಿಕೂಟ’ವು ತಾನು ಮಾಡಿದ ಕೆಲಸಗಳ ಕಾರಣದಿಂದಾಗಿ ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸಿದೆ. ಜನಾದೇಶವನ್ನು ‘ಮಹಾ ವಿಕಾಸ ಆಘಾಡಿ’ ಮೈತ್ರಿಕೂಟವು ಒಪ್ಪಿಕೊಳ್ಳಬೇಕು, ಅಭಿವೃದ್ಧಿ ಕಾರ್ಯಗಳಲ್ಲಿ ಸರ್ಕಾರವನ್ನು ಬೆಂಬಲಿಸಬೇಕು ಎಂದು ಸುದ್ದಿಗಾರರ ಜೊತೆ ಮಾತನಾಡಿದ ಶಿಂದೆ ಹೇಳಿದರು.

ADVERTISEMENT

ಇವಿಎಂಗಳಲ್ಲಿ ಆಗಿರುವ ಅಕ್ರಮದ ಕಾರಣದಿಂದಾಗಿ ತಮಗೆ ಸೋಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಚುನಾವಣೆಗಳಲ್ಲಿ ಮತ್ತೆ ಮತಪತ್ರಗಳ ಬಳಕೆ ಆರಂಭಿಸಬೇಕು ಎಂದು ಅವು ಒತ್ತಾಯಿಸಿವೆ.

‘ನೀವು ಜಯ ಸಾಧಿಸಿದಾಗ ಇವಿಎಂ ಹಗರಣ ಆಗಿರುವುದಿಲ್ಲ. ಆದರೆ ನೀವು ಚುನಾವಣೆಯಲ್ಲಿ ಸೋತಾಗ ಮತಯಂತ್ರಗಳು ಕೆಟ್ಟದ್ದಾಗಿ ಕಾಣುತ್ತವೆ. ಇದು ಸರಿಯಾದ ನಡೆ ಅಲ್ಲ’ ಎಂದು ಶಿಂದೆ ಅವರು ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಹರಿಹಾಯ್ದರು.

ವಿರೋಧ ಪಕ್ಷಗಳ ಸ್ಥಾನ ಯಾವುದು ಎಂಬುದನ್ನು ಜನರು ತೋರಿಸಿಕೊಟ್ಟಿದ್ದಾರೆ, ಮನೆಯಲ್ಲಿಯೇ ಕುಳಿತಿರುವವರಿಗೆ ತಾವು ಮತ ನೀಡುವುದಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಹೇಳಿದರು.

‘ಲೋಕಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟಕ್ಕೆ 2.48 ಕೋಟಿ ಮತಗಳು ದೊರೆತವು. ಇವು ಶೇ 43.55ರಷ್ಟು ಮತಗಳು. ಎಂವಿಎ ಅಭ್ಯರ್ಥಿಗಳು ಒಟ್ಟು 2.5 ಕೋಟಿ ಮತಗಳನ್ನು ಪಡೆದರು. ಇವು ಶೇ 43.71ರಷ್ಟು ಮತಗಳು. ಹೀಗಿದ್ದರೂ ವಿರೋಧ ಪಕ್ಷಗಳು 31 ಸ್ಥಾನ ಪಡೆದವು, ಮಹಾಯುತಿ ಮೈತ್ರಿಕೂಟ 17 ಸ್ಥಾನ ಪಡೆಯಿತು. ಆಗ ಇವಿಎಂಗಳಲ್ಲಿ ಅಕ್ರಮ ನಡೆದಿತ್ತು ಎಂದು ನಾವು ಹೇಳಬೇಕೇ’ ಎಂದು ಶಿಂದೆ ಪ್ರಶ್ನಿಸಿದರು.

ಉಪ ಸ್ಪೀಕರ್ ಹುದ್ದೆಗೆ ಕೋರಿಕೆ
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಭಾನುವಾರ ಭೇಟಿ ಮಾಡಿದ ಮಹಾ ವಿಕಾಸ ಆಘಾಡಿ ಮೈತ್ರಿಕೂಟದ (ಎಂವಿಎ) ನಾಯಕರು ವಿಧಾನಸಭೆಯ ಉಪ ಸ್ಪೀಕರ್ ಹುದ್ದೆಯನ್ನು ಎಂವಿಎ ಪಕ್ಷಗಳಿಗೆ ಬಿಟ್ಟುಕೊಡಬೇಕು ಎಂದು ಮನವಿ ಮಾಡಿದರು. ಸಂಪ್ರದಾಯದಂತೆ ಉಪ ಸ್ಪೀಕರ್ ಹುದ್ದೆಯನ್ನು ವಿರೋಧ ಪಕ್ಷಗಳಿಗೆ ಬಿಟ್ಟುಕೊಟ್ಟರೆ ಸ್ಪೀಕರ್‌ ಆಯ್ಕೆಯನ್ನು ಅವಿರೋಧವಾಗಿ ನಡೆಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಎಂವಿಎ ನಾಯಕರು ಫಡಣವೀಸ್ ಅವರಿಗೆ ತಿಳಿಸಿದರು.
ನಾರ್ವೇಕರ ನೂತನ ಸ್ಪೀಕರ್?
ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿ ಬಿಜೆಪಿಯ ರಾಹುಲ್ ನಾರ್ವೇಕರ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಸ್ಪೀಕರ್ ಹುದ್ದೆಗೆ ತನ್ನ ಕಡೆಯಿಂದ ಯಾರನ್ನೂ ಕಣಕ್ಕೆ ಇಳಿಸದೆ ಇರಲು ಎಂವಿಎ ಮೈತ್ರಿಕೂಟ ತೀರ್ಮಾನಿಸಿದೆ. ಸ್ಪೀಕರ್ ಹುದ್ದೆಗೆ ನಾರ್ವೇಕರ ಅವರು ಭಾನುವಾರ ನಾಮಪತ್ರ ಸಲ್ಲಿಸಿದ್ದಾರೆ. ಭಾನುವಾರ ನಡೆದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಒಟ್ಟು 105 ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ‘ರಾಜ್‌ ಠಾಕ್ರೆ ಅಪ್ರಸ್ತುತ’: ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್‌) ಮುಖ್ಯಸ್ಥ ರಾಜ್ ಠಾಕ್ರೆ ಅವರು ಅಪ್ರಸ್ತುತರಾಗಿದ್ದಾರೆ ಮಹಾಯುತಿ ಮೈತ್ರಿಕೂಟಕ್ಕೆ ಅವರ ಅಗತ್ಯ ಇಲ್ಲ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎಂಎನ್‌ಎಸ್‌ ಒಂದೂ ಸ್ಥಾನ ಗೆದ್ದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.