
ಬೀದಿ ನಾಯಿಗಳ ಹಾವಳಿ
ನವದೆಹಲಿ: ಬೀದಿ ನಾಯಿಗಳ ಹಾವಳಿ ಪ್ರಕರಣದಲ್ಲಿ ತನ್ನ ಮುಂದೆ ಹಲವು ಅರ್ಜಿಗಳು ಸಲ್ಲಿಕೆಯಾಗುತ್ತಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ‘ಮನುಷ್ಯರಿಗೆ ಸಂಬಂಧಿಸಿದ ಪ್ರಕರಣಗಳಲ್ಲೂ ಸಾಮಾನ್ಯವಾಗಿ ಇಷ್ಟೊಂದು ಅರ್ಜಿಗಳು ಬರುವುದಿಲ್ಲ’ ಎಂದು ಹೇಳಿದೆ.
ಮಂಗಳವಾರ ಇಬ್ಬರು ವಕೀಲರು ಬೀದಿ ನಾಯಿಗಳ ಹಾವಳಿ ವಿಷಯವನ್ನು ತನ್ನ ಮುಂದೆ ಪ್ರಸ್ತಾಪಿಸಿದಾಗ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಹೀಗೆ ಹೇಳಿದೆ.
‘ಈ ಪ್ರಕರಣದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದೇವೆ’ ಎಂದು ವಕೀಲರಲ್ಲಿ ಒಬ್ಬರು ಪೀಠಕ್ಕೆ ತಿಳಿಸಿದರು. ಆಗ ನ್ಯಾಯಮೂರ್ತಿ ಮೆಹ್ತಾ ಅವರು, ‘ಸಾಮಾನ್ಯವಾಗಿ ಮನುಷ್ಯರಿಗೆ ಸಂಬಂಧಿಸಿದ ಪ್ರಕರಣಗಳಲ್ಲೂ ಇಷ್ಟೊಂದು ಅರ್ಜಿಗಳು ಬರುವುದಿಲ್ಲ’ ಎಂದು ಹೇಳಿದರು.
‘ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಕೈಗೆತ್ತಿಕೊಳ್ಳಲಿದೆ. ಎಲ್ಲ ವಕೀಲರ ವಾದ ಆಲಿಸಲಾಗುವುದು’ ಎಂದು ಪೀಠ ಹೇಳಿತು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ.ಅಂಜಾರಿಯಾ ಅವರ ಪೀಠವು ವಿಚಾರಣೆ ನಡೆಸಲಿದೆ.
ಬೀದಿ ನಾಯಿಗಳಿಗೆ ಸಂಬಂಧಿಸಿದ ವಿಷಯದಲ್ಲಿ ಜುಲೈ 28ರಂದು ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಸುಪ್ರೀಂ ಕೋರ್ಟ್, ಈ ಸಂಬಂಧ ಈಗಾಗಲೇ ಕೆಲವು ನಿರ್ದೇಶನಗಳನ್ನು ನೀಡಿದೆ.