
ಜೈಪುರ: ಪಿಯು ವಿದ್ಯಾರ್ಥಿನಿಯನ್ನು ಅಪಹರಿಸಿ, ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದ್ದು, ದೂರು ನೀಡಿ ಎರಡು ದಿನ ಕಳೆದರೂ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ.
ಬೀಕಾನೇರ್‌ನ ನಾಪಾಸರ್ ಎಂಬಲ್ಲಿ ಜ.6ರಂದು ಘಟನೆ ನಡೆದಿದೆ. ವಿದ್ಯಾರ್ಥಿನಿಯ ಕುಟುಂಬದವರು ಜ.11ರಂದು ದೂರು ನೀಡಿದ್ದಾರೆ.
‘ಬಿಎನ್‌ಎಸ್‌ನ ವಿವಿಧ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಲ್ಲಿಯವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಸೋಮವಾರ ತಿಳಿಸಿದರು.
‘ವಿದ್ಯಾರ್ಥಿನಿಯು ಬೆಳಿಗ್ಗೆ ಕಾಲೇಜಿಗೆ ತೆರಳಿದ್ದಳು. ಇಬ್ಬರು ಹುಡುಗರು ಆಕೆಯನ್ನು ಮಾರ್ಗಮಧ್ಯೆಯೇ, ನಿಲ್ಲಿಸಿ ಕಾರಿನಲ್ಲಿ ಅಪಹರಿಸಿದರು. ಬಳಿಕ, ಹಲವು ತಾಸುಗಳ ವರೆಗೆ ಊರಿನ ಸುತ್ತಲೂ ಕಾರು ಚಲಾಯಿಸಿದರು. ಚಲಿಸುತ್ತಿದ್ದ ಕಾರಿನಲ್ಲಿ ಸರದಿ ಮೇಲೆ ಅತ್ಯಾಚಾರ ಎಸಗಿದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಪಕ್ಕದ ಊರಿಗೆ ಕಾರು ತಲುಪಿದಾಗ ಸ್ಥಳೀಯರಿಗೆ ಅನುಮಾನ ಮೂಡಿದೆ. ಆಗ, ಕಾರನ್ನು ಗ್ರಾಮಸ್ಥರು ತಡೆದು ನಿಲ್ಲಿಸಿದ್ದಾರೆ. ಆ ವೇಳೆ ವಿದ್ಯಾರ್ಥಿನಿಯನ್ನು ಕಾರಿನಿಂದ ತಳ್ಳಿದ ಹುಡುಗರು ಪರಾರಿಯಾಗಿದ್ದಾರೆ. ಬಳಿಕ, ವಿದ್ಯಾರ್ಥಿನಿಯ ಮನೆಯವರಿಗೆ ವಿಷಯ ತಿಳಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.