ನವದೆಹಲಿ: ಪ್ರಥಮ ವರ್ಷದ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಒಂಬತ್ತು ವರ್ಷದೊಳಗೆ ಕೋರ್ಸ್ ಪೂರ್ಣಗೊಳಿಸಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ(ಎನ್‌ಎಂಸಿ) ನಿಯಮಾವಳಿಗಳು ಹೇಳಿವೆ.
ಆಯೋಗ ಪ್ರಕಟಿಸಿರುವ ವೈದ್ಯಕೀಯ ಪದವಿ ಶಿಕ್ಷಣದ ನಿಯಮಾವಳಿಗಳ (ಜಿಎಂಇಆರ್–23) ಅನ್ವಯ ವಿದ್ಯಾರ್ಥಿಗಳು ಕೋರ್ಸ್ ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿ ಹೊಸ ಮಾನದಂಡಗಳನ್ನು ನಿಗದಿಪಡಿಸಲಾಗಿದೆ.
ದೇಶದ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿನ ಪ್ರವೇಶಾತಿಗೆ ನೀಟ್–ಯುಜಿ ಮೆರಿಟ್ ಪಟ್ಟಿ ಆಧಾರದ ಮೇಲೆ ಏಕರೂಪದ ಕೌನ್ಸೆಲಿಂಗ್ ನಡೆಸಬೇಕು. ಪ್ರಥಮ ವರ್ಷದಲ್ಲಿ ಅನುತ್ತೀರ್ಣರಾದವರಿಗೆ ಮತ್ತೆ ಪರೀಕ್ಷೆ ಬರೆದು ಪಾಸಾಗಲು ನಾಲ್ಕು ಅವಕಾಶವಷ್ಟೇ ಸಿಗಲಿವೆ. ಒಂಬತ್ತು ವರ್ಷಗಳ ಬಳಿಕ ಶಿಕ್ಷಣ ಪೂರ್ಣಗೊಳಿಸಲು ಅವಕಾಶ ಸಿಗುವುದಿಲ್ಲ ಎಂದು ಇತ್ತೀಚೆಗೆ ಹೊರಡಿಸಿರುವ ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
2021ರ ಇಂಟರ್ನಿಶಿಪ್ ನಿಯಮಾವಳಿಗಳ ಅನ್ವಯ ವೈದ್ಯಕೀಯ ವಿದ್ಯಾರ್ಥಿಗಳು ಇಂಟರ್ನಿಶಿಪ್ ಪೂರ್ಣಗೊಳಿಸುವುದು ಕಡ್ಡಾಯ. ಆಗಷ್ಟೇ ಅವರಿಗೆ ಪದವಿ ಪ್ರಮಾಣ ಪತ್ರ ಲಭಿಸುತ್ತದೆ.
ಎನ್‌ಎಂಸಿ ನಿಗದಿಪಡಿಸಿರುವ ಸೀಟ್ ಮ್ಯಾಟ್ರಿಕ್ಸ್ ಅನ್ವಯವೇ ಕೌನ್ಸೆಲಿಂಗ್ ನಡೆಸಬೇಕು. ಅಗತ್ಯವಿದ್ದಾಗ ವಿವಿಧ ಹಂತಗಳಲ್ಲೂ ಈ ಪ್ರಕ್ರಿಯೆ ನಡೆಸಬಹುದಾಗಿದೆ. ಈ ಬಗ್ಗೆ ಪದವಿಪೂರ್ವ ವೈದ್ಯಕೀಯ ಶಿಕ್ಷಣ ಮಂಡಳಿಯು (ಯುಜಿಎಂಇಬಿ) ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ.
ಸರ್ಕಾರವು ಕೌನ್ಸೆಲಿಂಗ್ ನಡೆಸುವ ಸಂಬಂಧ ಸಕ್ಷಮ ಪ್ರಾಧಿಕಾರವನ್ನು ನೇಮಿಸುತ್ತದೆ. ಇದರ ಮೂಲಕವೇ ಕಾಲೇಜುಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ. ಯಾವುದೇ ಕಾಲೇಜುಗಳು ನಿಯಮಾವಳಿ ಉಲ್ಲಂಘಿಸಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.