ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ಮತದಾರರ ಗುರುತಿನ ದಾಖಲೆಯಾಗಿ ಆಧಾರ್ ಸಂಖ್ಯೆಯನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಪ್ರಸ್ತುತ ಬಿಹಾರದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ 11 ದಾಖಲೆಗಳನ್ನು ಗೊತ್ತುಪಡಿಸಲಾಗಿದೆ. ಮತದಾರರು ಈ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಅರ್ಜಿ ನಮೂನೆ ಜೊತೆ ಸಲ್ಲಿಸಬೇಕಿದೆ.
ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠವು, 12ನೇ ದಾಖಲೆಯಾಗಿ ‘ಆಧಾರ್’ ಅನ್ನು ಪರಿಗಣಿಸುವಂತೆ ಹೇಳಿದೆ.
ಆದಾಗ್ಯೂ, ಆಧಾರ್ ಸಂಖ್ಯೆಯು ಪೌರತ್ವಕ್ಕೆ ಪುರಾವೆ ಅಲ್ಲ. ಅದನ್ನು ಗುರುತಿನ ದಾಖಲೆಯಾಗಿ ಪರಿಗಣಿಸಬಹುದಷ್ಟೆ. ಮತದಾರ ಸಲ್ಲಿಸಿದ ಆಧಾರ್ ಕಾರ್ಡ್ ಅಸಲಿ ಹೌದೇ ಅಲ್ಲವೇ ಎನ್ನುವುದನ್ನು ಆಯೋಗವು ಪರಿಶೀಲಿಸಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
‘ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕೆಂದು ಯಾರೂ ಬಯಸುತ್ತಿಲ್ಲ. ಆಯೋಗವು ನೈಜ ಮತದಾರರಿಗೆ ಮಾತ್ರ ಮತ ಚಲಾವಣೆಗೆ ಅವಕಾಶ ನೀಡಬೇಕು. ನಕಲಿ ದಾಖಲೆಗಳ ಆಧಾರದಲ್ಲಿ ನೈಜ ಪ್ರಜೆಗಳು ಎಂದು ಹೇಳಿಕೊಳ್ಳುತ್ತಿರುವವರನ್ನು ಮತದಾರರ ಪಟ್ಟಿಯಿಂದ ಹೊರಹಾಕಬೇಕು’ ಎಂದು ಕೋರ್ಟ್ ಸ್ಪಷ್ಟಪಡಿಸಿತು.
ಆಧಾರ್ ಅನ್ನು ಗುರುತಿನ ದಾಖಲೆಯಾಗಿ ಸ್ವೀಕರಿಸುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಅಗತ್ಯವಿರುವ ನಿರ್ದೇಶನಗಳನ್ನು ನೀಡುವಂತೆ ಆಯೋಗಕ್ಕೆ ನ್ಯಾಯಪೀಠ ಹೇಳಿತು.
ಇದೇ ವೇಳೆ, ಆಧಾರ್ ಕಾರ್ಡನ್ನು ಗುರುತಿನ ದಾಖಲೆಯಾಗಿ ಸ್ವೀಕರಿಸದ್ದಕ್ಕೆ ಸಂಬಂಧಿಸಿದಂತೆ ನೀಡಿದ್ದ ಶೋಕಾಸ್ ನೋಟಿಸ್‌ಗೆ ವಿವರಣೆ ನೀಡುವಂತೆ ಕೇಳಿತು.
ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು, 99.6ರಷ್ಟು ಮತದಾರರ ಹೆಸರನ್ನು ಒಳಗೊಂಡ ಕರಡು ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಮತದಾರರ ನೋಂದಣಿಗೆ ಗುರುತಿನ ದಾಖಲೆಯಾಗಿ ಆಧಾರ್ ಅನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದರೂ ಅದನ್ನು ಪಾಲನೆ ಮಾಡದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಚುನಾವಣಾ ಆಯೋಗಕ್ಕೆ ನಾಚಿಕೆಯಾಗಬೇಕು ಎಂದು ಕಾಂಗ್ರೆಸ್ ಸೋಮವಾರ ವಾಗ್ದಾಳಿ ನಡೆಸಿತು. ಇದೇ ವೇಳೆ ‘ಈ ಚುನಾವಣೆಯು ಆಡಳಿತ ವ್ಯವಸ್ಥೆ ಮತ್ತು ಚುನಾವಣಾ ಆಯೋಗದ ತಿರಸ್ಕಾರ ಧೋರಣೆ ವಿರುದ್ಧದ ಹೋರಾಟ’ ಎಂದು ಹೇಳಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ‘ಈ ಕುರಿತು ಸುಪ್ರೀಂ ಕೋರ್ಟ್ ಮೂರನೇ ಬಾರಿಗೆ ನಿರ್ದೇಶನ ನೀಡಿದೆ. ಅರ್ಹ ಮತದಾರರ ನೋಂದಣಿಗೆ ಉದ್ದೇಶಪೂರ್ವಕವಾಗಿ ಅನನುಕೂಲ ಉಂಟುಮಾಡಲು ಚುನಾವಣಾ ಆಯೋಗವು ನಿರಂತರವಾಗಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆ’ ಎಂದು ಆರೋಪಿಸಿದರು.
‘ರಾಜಕೀಯ ಪಕ್ಷಗಳು ನೇಮಿಸಿದ ಬ್ಲಾಕ್ ಮಟ್ಟದ ಏಜೆಂಟ್‌ಗಳನ್ನು ಗುರುತಿಸಲು ಮತ್ತು ಆಧಾರ್ ಅನ್ನು ದಾಖಲೆಯಾಗಿ ಸ್ವೀಕರಿಸಲು ಆಯೋಗವು ನಿರಾಕರಿಸಿತ್ತು. ಗೊತ್ತುಪಡಿಸಿದ ದಾಖಲೆಗಳನ್ನು ಮಾತ್ರ ಸ್ವೀಕರಿಸುವಂತೆ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿತ್ತು’ ಎಂದು ದೂರಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಇತಿಹಾಸವು ಕ್ಷಮಿಸುವುದಿಲ್ಲ ಎಂದು ಹರಿಹಾಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.