ನವದೆಹಲಿ: ‘ರಾಜ್ಯಗಳು ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿಯವರು ಅಂಕಿತ ಹಾಕುವುದಕ್ಕೆ ಕಾಲಮಿತಿ ನಿಗದಿ ಮಾಡಿ ಏಪ್ರಿಲ್ 8ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಕೇಂದ್ರ ಸರ್ಕಾರ ಪ್ರಶ್ನೆ ಮಾಡುತ್ತಿದೆ. ಈ ಮೂಲಕ ಅದು, ಸಂವಿಧಾನದ ಅಡಿಪಾಯವನ್ನೇ ನಾಶ ಮಾಡಲು ಹೊರಟಿದೆ’ ಎಂದು ವಿಪಕ್ಷಗಳ ಆಡಳಿತವಿರುವ ರಾಜ್ಯಗಳಾದ ಕರ್ನಾಟಕ, ಪಶ್ಚಿಮ ಬಂಗಾಳ ಹಾಗೂ ಹಿಮಾಚಲ ಪ್ರದೇಶ, ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ ಪ್ರತಿಪಾದಿಸಿವೆ.
‘ಸಂವಿಧಾನದ ಆಶಯದಂತೆ ಕಾರ್ಯನಿರ್ವಹಣೆ ಮಾಡುವುದಕ್ಕೆ ರಾಜ್ಯಪಾಲರು ಅಡ್ಡಿಯಾಗುವುದಕ್ಕೆ ಅವಕಾಶ ನೀಡಬಾರದು’ ಎಂದೂ ಈ ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿವೆ.
ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ನ್ಯಾಯಾಲಯ ಗಡುವು ನಿಗದಿ ಮಾಡಬಹುದೇ ಎಂಬ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಳಿರುವ ಸಲಹೆಗೆ ಸಂಬಂಧಿಸಿ ನಡೆದ ವಿಚಾರಣೆ ವೇಳೆ, ಕಾಂಗ್ರೆಸ್ ಹಾಗೂ ಟಿಎಂಸಿ ಆಡಳಿತವಿರುವ ರಾಜ್ಯಗಳು ಈ ಪ್ರತಿಪಾದನೆ ಮಾಡಿವೆ.
ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠ ವಿಚಾರಣೆ ನಡೆಸಿತು. ನ್ಯಾಯಮೂರ್ತಿಗಳಾದ ಸೂರ್ಯಕಾಂತ, ವಿಕ್ರಮನಾಥ್, ಪಿ.ಎಸ್.ನರಸಿಂಹ ಹಾಗೂ ಎ.ಎಸ್.ಚಂದೂರ್ಕರ್ ಈ ಪೀಠದಲ್ಲಿ ಇದ್ದಾರೆ.
ಪಶ್ಚಿಮ ಬಂಗಾಳ ಪರ ಹಿರಿಯ ವಕೀಲ ಕಪಿಲ್ ಸಿಬಲ್, ಕರ್ನಾಟಕ ಪರ ಗೋಪಾಲ್ ಸುಬ್ರಮಣಿಯನ್ ಹಾಗೂ ಹಿಮಾಚಲ ಪ್ರದೇಶ ಪರ ಆನಂದ ಶರ್ಮಾ ಹಾಜರಿದ್ದರು. ವಾದ ಆಲಿಸಿದ ಪೀಠವು, ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿತು.
ವಿಪಕ್ಷಗಳ ಆಡಳಿತವಿರುವ ರಾಜ್ಯಗಳ ವಾದ
ಮಸೂದೆಗಳು ಜನರ ಆಶಯಗಳನ್ನು ಒಳಗೊಂಡಿರುತ್ತವೆ. ಹೀಗಾಗಿ ಜನರ ಈ ಆಶಯಗಳ ಕುರಿತು ರಾಜ್ಯಪಾಲರು ಹಾಗೂ ರಾಷ್ಟ್ರಪತಿಯವರು ತಮ್ಮ ಮನಸಿಗೆ ಬಂದಂತೆ ನಿರ್ಣಯಿಸಬಾರದು
ವಿಧಾನಸಭೆಗಳು ಅಂಗೀಕರಿಸುವ ಮಸೂದೆಗಳ ಕುರಿತು ನ್ಯಾಯಾಂಗ ಪರಿಶೀಲನೆ ನಡೆಸಬಹುದು. ಆದರೆ ಈ ಮಸೂದೆಗಳ ಕುರಿತು ನಿರ್ಧಾರ ಕೈಗೊಳ್ಳುವ ಸಾರ್ವಭೌಮ ಅಧಿಕಾರವನ್ನು ರಾಜ್ಯಗಳು ಹೊಂದಿದ್ದು ಇದನ್ನು ರಾಜ್ಯಪಾಲರು ಪ್ರಶ್ನೆ ಮಾಡುವಂತಿಲ್ಲ
ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಕಾರ್ಯಾಂಗವು ಹಸ್ತಕ್ಷೇಪ ಮಾಡುವಂತಿಲ್ಲ. ವಿಧಾನಸಭೆಗಳಲ್ಲಿ ಅಂಗೀಕಾರಗೊಂಡ ಮಸೂದೆಗಳಿಗೆ ರಾಜ್ಯಪಾಲರು ತಕ್ಷಣವೇ ಅಂಕಿತ ಹಾಕಬೇಕು. ಇದಕ್ಕಾಗಿ 3 ಅಥವಾ 6 ತಿಂಗಳು ತೆಗೆದುಕೊಳ್ಳಬಾರದು
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರದಿಂದ ಈ ವರೆಗೆ ಸಂಸತ್‌ನಲ್ಲಿ ಅಂಗೀಕಾರಗೊಂಡ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕದೇ ತಡೆ ಹಿಡಿದ ನಿದರ್ಶನಗಳು ವಿರಳ
ಯಾವುದೇ ಒಂದು ಮಸೂದೆಯನ್ನು ಪ್ರಶ್ನಿಸಿ ನಾಗರಿಕರು ನ್ಯಾಯಾಲಯದ ಮೆಟ್ಟಿಲೇರಬಹುದು. ಅಪರೂಪದ ಸಂದರ್ಭದಲ್ಲಿ ಮಾತ್ರ ಮಸೂದೆಗೆ ಅಂಕಿತ ಹಾಕುವುದಿಲ್ಲ ಎಂದು ರಾಜ್ಯಪಾಲರು ಹೇಳಬಹುದು
ರಾಜ್ಯಗಳನ್ನು ಮುನ್ಸಿಪಾಲಿಟಿಗಳಂತೆ ನಡೆಸಿಕೊಳ್ಳಬಾರದು. ರಾಷ್ಟ್ರಪತಿಗಳು ಮಸೂದೆಯನ್ನು ತಡೆಹಿಡಿಯವಂತಿಲ್ಲ. ಟಿಪ್ಪಣಿಯೊಂದಿಗೆ ಅದನ್ನು ರಾಜ್ಯಗಳಿಗೆ ತಕ್ಷಣವೇ ವಾಪಸು ಕಳುಹಿಸಬೇಕು
ಮಸೂದೆಗಳಿಗೆ ಅಂಕಿತ ಹಾಕಲು ಕಾಲಮಿತಿ ವಿಧಿಸುವುದಕ್ಕೆ ಸಂಬಂಧಿಸಿ ರಾಷ್ಟ್ರಪತಿಯವರು ಕೇಳಿರುವ 14 ಪ್ರಶ್ನೆಗಳು ‘ಕಾಲ್ಪನಿಕ’ವಾಗಿ ಇಲ್ಲವೇ ‘ವಾಸ್ತವ ಸಂಗತಿಗಳ ಕೊರತೆಯಿಂದ ಕೂಡಿವೆ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.