ADVERTISEMENT

ದೇವಾಲಯ ಪ್ರವೇಶಕ್ಕೆ ನಿರಾಕರಣೆ: ಕ್ರೈಸ್ತ ಸೇನಾಧಿಕಾರಿ ವಜಾ ಎತ್ತಿಹಿಡಿದ SC

ಪಿಟಿಐ
Published 25 ನವೆಂಬರ್ 2025, 11:09 IST
Last Updated 25 ನವೆಂಬರ್ 2025, 11:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರೆಜಿಮೆಂಟ್‌ನ ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ಗರ್ಭಗುಡಿಗೆ ಪ್ರವೇಶಿಸಲು ನಿರಾಕರಿಸಿದ್ದಕ್ಕೆ ಸೇನೆಯಿಂದಲೇ ವಜಾಗೊಳಿಸಿದ್ದನ್ನು ಪ್ರಶ್ನಿಸಿದ್ದ ಕ್ರೈಸ್ತ ಧರ್ಮಕ್ಕೆ ಸೇರಿದ ಮಾಜಿ ಅಧಿಕಾರಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾ. ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠವು, ‘ಅತ್ಯಂತ ಘೋರ ಪ್ರಮಾಣದ ಅಶಿಸ್ತು’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

‘ಈ ನಿರ್ಧಾರದಿಂದ ನೀವು ಯಾವ ರೀತಿಯ ಸಂದೇಶವನ್ನು ನೀಡಲು ಹೊರಟಿದ್ದೀರಿ? ಅದಕ್ಕಾಗಿಯೇ ಇವರನ್ನು ಕೆಲಸದಿಂದ ಕಿತ್ತೆಸೆದಿರಬೇಕು. ಇದು ಒಬ್ಬ ಸೇನಾಧಿಕಾರಿ ತೋರಿದ ಘೋರ ಅಶಿಸ್ತು’ ಎಂದು ನ್ಯಾ. ಸೂರ್ಯಕಾಂತ್ ಹೇಳಿದ್ದಾರೆ.

ADVERTISEMENT

‘ನಾಯಕರೆಂದಿನಿಸಿಕೊಂಡವರು ಒಂದು ಉತ್ತಮ ಪರಂಪರೆಯನ್ನು ಹುಟ್ಟುಹಾಕಬೇಕು. ನೀವು ನಿಮ್ಮ ಸೈನಿಕರ ತಂಡವನ್ನು ಅವಮಾನಿಸಿದ್ದೀರಿ. ನಿಮ್ಮ ಪಾದ್ರಿ ಏನು ಹೇಳುತ್ತಾರೋ ಅದನ್ನು ಅಲ್ಲಿಯೇ ಬಿಡುತ್ತೀರಿ. ನಿಮ್ಮ ಧರ್ಮ ನಿಮಗೆ ಏನು ಹೇಳುತ್ತದೆ ಎಂಬುದರ ಅರಿವೇ ನಿಮಗಿಲ್ಲ. ಅದರಲ್ಲೂ ಸಮವಸ್ತ್ರದಲ್ಲಿರುವ ನಿಮಗೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಮಲೇಸನ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್‌, ‘ತನ್ನ ಕಕ್ಷಿದಾರ ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಪ್ರದೇಶದಲ್ಲಿನ ದೇವಾಲಯದ ಗರ್ಭಗುಡಿಗೆ ಪ್ರವೇಶಿಸಲು ನಿರಾಕರಿಸಿದ ಒಂದು ತಪ್ಪಿಗೆ ಅವರನ್ನು ಕರ್ತವ್ಯದಿಂದಲೇ ವಜಾಗೊಳಿಸಲಾಗಿದೆ. ಇದಕ್ಕೆ ಅವರು ಪಾಲಿಸುವ ಕ್ರೈಸ್ತ ಧರ್ಮ ಅಡ್ಡಿಯಾಗುತ್ತದೆ ಎಂಬ ನಂಬಿಕೆ ಅವರದ್ದಾಗಿತ್ತು. ಇಲ್ಲವಾದಲ್ಲಿ, ಅವರು ಖಂಡಿತವಾಗಿಯೂ ಸರ್ವಧರ್ಮ ಪಾಲಿಸುವ ಕೇಂದ್ರಗಳು ಮತ್ತು ರೆಜಿಮೆಂಟ್‌ನ ಕಾರ್ಯಕ್ರಮಗಳಲ್ಲಿ ಗೌರವಯುತವಾಗಿ ಪಾಲ್ಗೊಳ್ಳುತ್ತಿದ್ದರು’ ಎಂದಿದ್ದಾರೆ.

‘ಶಿಸ್ತು ಪಾಲಿಸುವ ಸೇನೆಯಲ್ಲಿ ಇಂಥ ದುಷ್ಟ ಸ್ವಭಾವ ಅಗತ್ಯವಿತ್ತೇ? ತನ್ನದೇ ತಂಡದಲ್ಲಿರುವ ಸೈನಿಕರು ನಂಬಿಕೆ ಇಟ್ಟಿರುವ ಸ್ಥಳಕ್ಕೆ ಪ್ರವೇಶಿಸಲು ಹೇಗೆ ನಿರಾಕರಿಸಿದರು’ ಎಂದಿದ್ದಾರೆ.

‘ಸಿಖ್‌ ಸೈನಿಕರು ಇರುವ ಸೇನಾ ರೆಜಿಮೆಂಟ್‌ ಕೆಲವೆಡೆ ಗುರುದ್ವಾರದ ನಿರ್ವಹಣೆ ಮಾಡುತ್ತಿದೆ. ಗುರುದ್ವಾರವೂ ಅತ್ಯಂತ ಪವಿತ್ರವಾದ ಧಾರ್ಮಿಕ ಕೇಂದ್ರ. ಆದರೆ ಇಲ್ಲಿ ಮಾಜಿ ಸೇನಾಧಿಕಾರಿಯ ವರ್ತನೆಯು ಇತರ ಧರ್ಮವನ್ನು ಅವಮಾನಿಸುವ ಉದ್ದೇಶದ್ದಾಗಿರಲಿಲ್ಲ’ ಎಂದೂ ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

‘ವ್ಯಕ್ತಿಯೊಬ್ಬ ಸೇನಾ ಸಮವಸ್ತ್ರ ಧರಿಸಿದ್ದಾರೆ ಎಂಬ ಕಾರಣಕ್ಕಾಗಿಯೇ ಸಂವಿಧಾನದ 25ನೇ ವಿಧಿಯಡಿ ಧರ್ಮವನ್ನು ಪಾಲಿಸುವ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗದು’ ಎಂದು ವಕೀಲರು ಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಬಗ್ಚಿ, ‘25ನೇ ವಿಧಿಯಡಿ ಅಗತ್ಯ ಧಾರ್ಮಿಕ ಹಕ್ಕುಗಳನ್ನು ರಕ್ಷಿಸುತ್ತದೆಯೇ ಹೊರತು, ಭಾವನೆಯನ್ನಲ್ಲ. ಕ್ರೈಸ್ತ ಧರ್ಮದಲ್ಲಿ ಹಿಂದೂ ದೇವಾಲಯ ಪ್ರವೇಶ ನಿಷಿದ್ಧವೇ?’ ಎಂದು ಪ್ರಶ್ನಿಸಿದ್ದಾರೆ.

‘ನೀವು ನಿಮ್ಮ ವೃತ್ತಿಯಲ್ಲಿ ನೂರು ವಿಷಯಗಳಲ್ಲಿ ಅದ್ಭುತವಾಗಿ ಕೆಲಸ ಮಾಡಿರಬಹುದು. ಆದರೆ ಭಾರತೀಯ ಸೇನೆ ಎಂಬುದು ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟಿದೆ ಎಂಬುದನ್ನು ಮರೆಯಬಾರದು. ನೀವು ನಿಮ್ಮ ಸೈನಿಕರ ಭಾವನೆಗಳನ್ನು ಗೌರವಿಸುವುದರಲ್ಲಿ ವಿಫಲರಾಗಿದ್ದೀರಿ’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.

ಏನಿದು ಪ್ರಕರಣ?

3ನೇ ಕ್ಯಾವಲರಿ ರೆಜಿಮೆಂಟ್‌ಗೆ 2017ರಲ್ಲಿ ಕಮಲೇಸನ್‌ ಅವರು ನೇಮಕಗೊಂಡು, ‘ಬಿ’ ಸ್ಕ್ವಾಡ್ರನ್‌ನ ಮುಖ್ಯಸ್ಥರಾಗಿ ನಿಯೋಜನೆಗೊಂಡರು. ಇದರಲ್ಲಿ ಸಿಖ್‌ ಧರ್ಮದವರೇ ಹೆಚ್ಚಾಗಿದ್ದರು. ಈ ರೆಜಿಮೆಂಟ್ ದೇವಾಲಯ ಮತ್ತು ಗುರುದ್ವಾರವನ್ನು ನಿರ್ವಹಣೆ ಮಾಡುತ್ತಿತ್ತು. ಆದರೆ ಅದು ಸರ್ವ ಧರ್ಮ ಕೇಂದ್ರವಾಗಲೀ ಅಥವಾ ಚರ್ಚ್ ಆಗಿರಲಿಲ್ಲ.

ಈ ಕೇಂದ್ರಗಳಿಗೆ ತಮ್ಮ ತಂಡದೊಂದಿಗೆ ಪ್ರತಿವಾರ ಭೇಟಿ ನೀಡುತ್ತಿದ್ದೆ. ಆದರೆ ಧಾರ್ಮಿಕ ಕಾರಣಗಳಿಂದಾಗಿ ಆರತಿ ಅಥವಾ ಪೂಜೆ ನಡೆಯುವ ಗರ್ಭಗುಡಿಯನ್ನು ಪ್ರವೇಶಿಸುತ್ತಿರಲಿಲ್ಲ ಎಂದು ಕಮಲೇಸನ್ ಹೇಳಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸೇನೆ, ಅವರೊಂದಿಗೆ ಹಲವು ಬಾರಿ ಸಮಾಲೋಚನೆ ನಡೆಸಿತ್ತು. ಜತೆಗೆ ರೆಜಿಮೆಂಟ್‌ನಲ್ಲಿ ಇದರ ಮಹತ್ವವನ್ನೂ ತಿಳಿಸುವ ಪ್ರಯತ್ನ ಮಾಡಿತ್ತು. ಹೀಗಿದ್ದರೂ, ಅವರು ನಿರಾಕರಿಸಿದ್ದು ತಂಡವಾಗಿ ಕಾರ್ಯ ನಿರ್ವಹಿಸಲು ರೆಜಿಮೆಂಟ್‌ಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ವಜಾಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಸೇನೆ ಹೇಳಿದೆ.

ಕಮಲೇಸನ್ ಅವರನ್ನು ವಜಾಗೊಳಿಸಿದ್ದನ್ನು ಹೈಕೋರ್ಟ್‌ ಕೂಡಾ ಎತ್ತಿ ಹಿಡಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.