
ನವದೆಹಲಿ (ಪಿಟಿಐ): ‘ಮುಗ್ದ ಪ್ರಾಣಿಗಳ ಚಲನವಲನದ ಮಾರ್ಗಗಳನ್ನು ಮನುಷ್ಯರು ಮತ್ತು ವಾಣಿಜ್ಯ ಉದ್ಯಮಗಳು ನಿರ್ಬಂಧಿಸಿದಾಗೆಲ್ಲ, ಈ ಪ್ರಾಣಿಗಳು ಮೌನವಾಗಿ ಬಳಲುತ್ತವೆ’ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
‘ಹೀಗಾಗಿಯೇ ನ್ಯಾಯಾಲಯಗಳು ಯಾವಾಗಲೂ ಈ ಪ್ರಾಣಿಗಳ ಪರ ಒಲವು ತೋರುತ್ತವೆ’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ, ವಿಪುಲ್ ಎಂ. ಪಾಂಚೋಲಿ ಅವರ ಪೀಠ ತಿಳಿಸಿದೆ.
ತಮಿಳುನಾಡಿನ ನೀಲಗಿರಿಯ ಸಿಗೂರ್ ಪ್ರದೇಶದಲ್ಲಿರುವ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳ ಮಾಲೀಕರು ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸಿತು.
‘ಆನೆ ಕಾರಿಡಾರ್‌ನಲ್ಲಿ ವಾಣಿಜ್ಯ ಚಟುವಟಿಕ ನಡೆಸುತ್ತಿದ್ದೀರಿ. ನಿಮ್ಮ ಈ ನಿರ್ಮಾಣಗಳು ಆನೆಗಳ ಚಲನೆಗೆ ಅಡ್ಡಿಯಾಗುತ್ತಿವೆ. ಇಲ್ಲಿ ಪ್ರಾಣಿಗಳು ಮೌನ ಬಲಿಪಶುಗಳಾಗುತ್ತಿವೆ. ಅವುಗಳಿಗೆ ಅನುಕೂಲ ಮಾಡಬೇಕಿದೆ’ ಎಂದು ಪೀಠ ಹೇಳಿದೆ.
ತಮಿಳುನಾಡು ಸರ್ಕಾರವು ಸಿಗೂರ್ ಭಾಗದಲ್ಲಿನ ಆನೆ ಕಾರಿಡಾರ್‌ಗಳ ಅಧಿಸೂಚನೆ ಹೊರಡಿಸಿದೆ. ಈ ವನ್ಯಜೀವಿ ಪ್ರದೇಶಗಳಲ್ಲಿನ ಹೋಟೆಲ್‌ಗಳು, ರೆಸಾರ್ಟ್‌ಗಳನ್ನು ಖಾಲಿ ಮಾಡುವಂತೆ ಸರ್ಕಾರ ಸೂಚಿಸಿದೆ. ಅದನ್ನು ವಿರೋಧಿಸಿ ಹೋಟೆಲ್, ರೆಸಾರ್ಟ್ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಈ ಕುರಿತು ವಿವರವಾದ ವಿಚಾರಣೆ ಅಗತ್ಯವಿದೆ ಎಂದ ಪೀಠವು, ವಿಚಾರಣೆಯನ್ನು ಜನವರಿ ಮೊದಲ ವಾರಕ್ಕೆ ಮುಂದೂಡಿತು. ಸಿಗೂರ್ ಆನೆ ಕಾರಿಡಾರ್ ವ್ಯಾಪ್ತಿಯಲ್ಲಿ 39 ರೆಸಾರ್ಟ್‌ಗಳು, 390 ಮನೆಗಳು ಸೇರಿದಂತೆ 800ಕ್ಕೂ ಹೆಚ್ಚು ಕಟ್ಟಡಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.